ಸಮಗ್ರ ನ್ಯೂಸ್: ಹಿಜಾಬ್ ವಿವಾದ ಮತ್ತೆ ಭುಗಿಲೆದ್ದಿದೆ. ಇದೀಗ ಕರಾವಳಿಯ ಹೃದಯ ಭಾಗದಲ್ಲಿರುವ ಕಾರ್‌ಸ್ಟ್ರೀಟ್‌ನಲ್ಲಿರುವ ಡಾ.ಪಿ.ದಯಾನಂದ ಪೈ – ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ಇದೀಗ ಮತ್ತೆ ಭುಗಿಲೆದ್ದಿದೆ.
ಕಾಲೇಜಿಗೆ ದುಪ್ಪಟ್ಟಾವನ್ನು ಹಾಕಿಕೊಂಡು ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ತಡೆದ ಹಿಂದೂ ವಿದ್ಯಾರ್ಥಿಗೆ ‘ಕಾಲೇಜಿಗೆ ನಾವು ಫೀಸ್ ಕಟ್ಟುತ್ತೇವೆ. ಕಾಲೇಜು ನಿಮ್ಮಪ್ಪಂದಾ?’ ಎಂದು ಮುಸ್ಲಿಂ ವಿದ್ಯಾರ್ಥಿನಿಯೋರ್ವಳು ಪ್ರಶ್ನಿಸಿದ್ದು, ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಸಿತ್ತು. ಎರಡು ವಿದ್ಯಾರ್ಥಿ ಗುಂಪುಗಳ ಮಧ್ಯೆ ಮಾತಿನ ಚಕಮಕಿ ಉಂಟಾಗಿ ಬಳಿಕ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿತು.
ಇಂದು ಪ್ರಾಂಶುಪಾಲರ ಅನುಮತಿ ಮೇರೆಗೆ ವಿದ್ಯಾರ್ಥಿನಿಯರು ಪಿನ್ ಹಾಕದೇ ಕೇವಲ ಶಾಲು ಧರಿಸಿ ಪರೀಕ್ಷೆಗೆ ಹಾಜರಾಗಿದ್ದರು. ಆದರೆ, ಕೆಲ ವಿದ್ಯಾರ್ಥಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅವರನ್ನು ಪರೀಕ್ಷಾ ತರಗತಿಯಿಂದ ಹೊರಹೋಗಲು ತಿಳಿಸಿದ್ದಾರೆ. ಪರಿಣಾಮ ಎರಡು ವಿದ್ಯಾರ್ಥಿ ಗುಂಪುಗಳ ಮಧ್ಯೆ ವಾಗ್ವಾದ ಉಂಟಾಗಿದೆ.
ಕಾಲೇಜು ಗೇಟು ಮುಂಭಾಗದಲ್ಲೇ ಪರಸ್ಪರ ಜಗಳಕ್ಕಿಳಿದಿದ್ದಾರೆ. ಪೊಲೀಸರು ಮಧ್ಯ ಪ್ರವೇಶಿಸಿದ ಬಳಿಕ ಪರಿಸ್ಥಿತಿ ಹತೋಟಿಗೆ ಬಂದಿದೆ. ಪ್ರಾಂಶುಪಾಲರ ನೇತೃತ್ವದಲ್ಲಿ ಕಾಲೇಜಿನಲ್ಲಿ ಸಭೆ ನಡೆದಿದ್ದು, ಪರಿಸ್ಥಿತಿ ತಿಳಿಯಾಗಿದೆ.