ಸಮಗ್ರ ನ್ಯೂಸ್: ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಮಂಗಳೂರು ಮೂಲದ ವಿದ್ಯಾರ್ಥಿನಿ ಅನೈನಾ ಅನ್ನಾ ಪಾಸ್ ಪೋರ್ಟ್ ಇಲ್ಲದೆ ಸಂಕಷ್ಟಕ್ಕೊಳಗಾಗಿದ್ದಾರೆ.
ಉಕ್ರೇನ್ ನಲ್ಲಿ ರಷ್ಯಾದ ದಾಳಿ ಮುಂದುವರಿದಿದ್ದು, ಯುದ್ಧಪೀಡಿತ ದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆ ತರುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಆದರೆ ಮಂಗಳೂರಿನ ದೇರೆಬೈಲು ಮೂಲದ ಅನೈನಾ ಅವರ ಪಾಸ್ ಪೋರ್ಟ್ ಏಜೆಂಟರ ಬಳಿ ಇದ್ದು, ಅವರಿಗೆ ಕರೆ ಮಾಡಿದರೆ ಅವರು ಇರುವಲ್ಲಿಗೆ ತೆರಳಿ ಪಾಸ್ ಪೋರ್ಟ್ ಪಡೆದುಕೊಳ್ಳುವಂತೆ ಹೇಳಿದ್ದಾರೆ. ಆದರೆ ಅವರಿರುವ ಸ್ಥಳದಲ್ಲಿ ದಾಳಿ ನಡೆಯುತ್ತಿರುವುದರಿಂದ ಹೋಗಲು ಸಾಧ್ಯವಾಗುತ್ತಿಲ್ಲ.
ಇದೀಗ ರೈಲು ಮುಖಾಂತರ ಅನೈನಾ ಪೋಲೆಂಡ್ ಗೆ ಪ್ರಯಾಣ ಬೆಳೆಸಿರುವುದರಿಂದ ಪಾಸ್ ಪೋರ್ಟ್ ಸಿಗುವ ಸಾಧ್ಯತೆ ಕಡಿಮೆ ಇದೆ. ಈಗಾಗಲೇ ಈ ಬಗ್ಗೆ ರಾಯಭಾರಿ ಕಚೇರಿ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ತಾತ್ಕಾಲಿಕ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಅನೈನಾ ಅನ್ನಾ ಅವರ ತಾಯಿ ಸಂಧ್ಯಾ ಅವರು ತಿಳಿಸಿದ್ದಾರೆ.
ದಾಳಿಗೊಳಗಾದ ಖಾರ್ಕಿವ್ ನಗರದಲ್ಲಿ ಅನೈನಾ ಇದ್ದರು. ಅವರ ವಿಶ್ವವಿದ್ಯಾನಿಲಯದ ಕಟ್ಟಡದ ಪಕ್ಕದಲ್ಲಿದ್ದ ಕಟ್ಟಡವೊಂದು ಸ್ಫೋಟಕ್ಕೆ ಒಳಗಾಗಿತ್ತು.