ಸಮಗ್ರ ನ್ಯೂಸ್: ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಕ್ರಾಸ್ ಬಳಿ ನಡೆದಿದೆ.
ಬೆಂಗಳೂರು ಮೂಲದ ನಿವಾಸಿಗಳಾದ ಗೌಸ್ (35), ಅವರ ಪತ್ನಿ ಅಮ್ಮಾಜಾನ್ (25) ಮತ್ತು ಪುತ್ರ ರಿಯಾಜ್ (13) ಎಂಬುವರು ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಗೌಸ್ ಮೂಲತಃ ಹೊಸಕೋಟೆ ನಿವಾಸಿಯಾಗಿದ್ದು, ಅಮ್ಮಾಜಾನ್ ಆಂಧ್ರ ಮೂಲದವರು. ಇವರು ದ್ವಿಚಕ್ರ ವಾಹನದಲ್ಲಿ ಬೆಂಗಳೂರಿನಿಂದ ಆಂಧ್ರ ಪ್ರದೇಶದ ಕದ್ರಿ ಕಡೆಗೆ ತೆರಳುತ್ತಿದ್ದರು. ಬಾಗೆಪಲ್ಲಿ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ಹೊನ್ನೇನಹಳ್ಳಿ ಕ್ರಾಸ್ ಬಳಿ ಬೈಕ್ಗೆ ಡಿಕ್ಕಿ ಹೊಡೆದಿದೆ.
ಸ್ಥಳಕ್ಕೆ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಆಗಮಿಸಿ ಮೃತ ದೇಹಗಳನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದು, ತನಿಖೆ ಮುಂದುವರೆಸಿದ್ದಾರೆ.