ಸಮಗ್ರ ನ್ಯೂಸ್: ಬೈಲೋರಷ್ಯಾದಲ್ಲಿ ಸಂಧಾನ ಮಾತುಕತೆಗೆ ಉಕ್ರೇನ್ ಕೊನೆಗೂ ಒಪ್ಪಿಗೆ ನೀಡಿದೆ. ಈ ಮೂಲಕ ಎರಡು ದೇಶಗಳ ನಡುವಣ ಯುದ್ಧ ಅಂತ್ಯಗೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ.
ಬೈಲೋರಷ್ಯಾದಲ್ಲಿ ನಾಳೆ ಸಂಜೆಯೊಳಗೆ ಸಂಧಾನ ಮಾತುಕತೆಗೆ ಬಾರದೇ ಇದ್ದಲ್ಲಿ ಪರಮಾಣು ಬಳಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ರಷ್ಯಾ ಎಚ್ಚರಿಕೆ ನೀಡಿದ ಬೆನ್ನಲ್ಲೇ ಉಕ್ರೇನ್ ಮಾತುಕತೆಗೆ ಒಪ್ಪಿಗೆ ಸೂಚಿಸಿದೆ.
ಇದಕ್ಕೂ ಮುನ್ನ ಉಕ್ರೇನ್ ಮೇಲೆ ದಾಳಿ ಮಾಡಲು ಬೈಲೋರಷ್ಯಾವನ್ನು ರಷ್ಯಾ ಬಳಸಿಕೊಳ್ಳುತ್ತಿದೆ. ಆದ್ದರಿಂದ ಇಲ್ಲಿ ಮಾತುಕತೆಗೆ ಬರುವುದಿಲ್ಲ. ಬೇರೆ ಜಾಗ ಸೂಚಿಸಿದರೆ ಮಾತುಕತೆಗೆ ಸಿದ್ಧ ಎಂದು ಉಕ್ರೇನ್ ಪಟ್ಟು ಹಿಡಿದಿತ್ತು.
ರಷ್ಯಾ ಇದೀಗ ಬೈಲೋರಷ್ಯಾದ ಗಡಿಯಲ್ಲಿ ಮಾತುಕತೆಗೆ ಆಹ್ವಾನಿಸಿದೆ. ಅಲ್ಲದೇ ಸಂಧಾನ ಮಾತುಕತೆಗೆ ರಷ್ಯಾದ ನಿಯೋಗ ಬೈಲೋರಷ್ಯಾಗೆ ಆಗಮಿಸಿದೆ.