ಸಮಗ್ರ ನ್ಯೂಸ್: ಕರಾವಳಿ ಭಾಗದ ಬಡ ಗರ್ಭಿಣಿಯರ ಹೆರಿಗೆ ಆಸ್ಪತ್ರೆ ಅಂತಾನೇ ಖ್ಯಾತಿಯಾಗಿರುವ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಬ್ರಿಟಿಷ್ ಕಾಲದ ಲೇಡಿಗೋಷನ್ ಎಂಬ ಹೆಸರನ್ನು ತೆಗೆದು ರಾಣಿ ಅಬ್ಬಕ್ಕ ಆಸ್ಪತ್ರೆ ಎಂಬುವುದಾಗಿ ಮರು ನಾಮಕರಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್, “ಮಂಗಳೂರಿನ ಹೆರಿಗೆ ಆಸ್ಪತ್ರೆ ಲೇಡಿಗೋಷನ್‌ನ ಹೆಸರು ಬದಲಾವಣೆಗೆ ಚಿಂತನೆ ಮಾಡಲಾಗಿದೆ. ಲೇಡಿಗೋಷನ್ ಎಂಬ ಹೆಸರನ್ನು ತೆಗೆದು ರಾಣಿ ಅಬ್ಬಕ್ಕ ಹೆಸರನ್ನು ಇಡಲು ತೀರ್ಮಾನಿಸಲಾಗಿದೆ,” ಎಂದರು.
ಬ್ರಿಟಿಷರಿಗಿಂತ ಮೊದಲು ಭಾರತಕ್ಕೆ ದಾಳಿ ಮಾಡಿದ್ದ ಪೋರ್ಚುಗೀಸರನ್ನು ದಿಟ್ಟವಾಗಿ ಎದುರಿಸಿದ ಕರಾವಳಿಯ ವೀರೆ, ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕ ಆಗಿದ್ದಾರೆ. ಯಾರೋ ಬ್ರಿಟೀಷರು ಇಟ್ಟು ಹೋದ ಹೆಸರನ್ನು ಮುಂದುವರಿಸುವುದಕ್ಕಿಂತ ರಾಣಿ ಅಬ್ಬಕ್ಕ ಹೆಸರನ್ನು ಇಡುವುದು ಸೂಕ್ತ ಅಂತಾ ಜನರ ಅಭಿಪ್ರಾಯವಾಗಿದೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.