ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಜನರ ಶ್ರದ್ಧಾ ಭಕ್ತಿಯ ಆರಾಧ್ಯ ಕೇಂದ್ರ ಕಾರಿಂಜ ದೇವಸ್ಥಾನಕ್ಕೆ ಮಾರಕವಾಗಿದ್ದ ಅಕ್ರಮ ಕಲ್ಲು ಗಣಿಗಾರಿಕೆಗೆ ಶಾಶ್ವತ ಬೀಗ ಜಡಿಯಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅಕ್ರಮ ಕಲ್ಲು ಗಣಿಗಾರಿಕೆಯ ವಿರುದ್ಧ ದಿಟ್ಟ ನಿರ್ಧಾರ ಕೈಗೊಂಡಿದ್ದು, ಅಕ್ರಮ ಗಣಿಗಾರಿಕೆಗೆ ಬೀಗ ಹಾಕಿ ಅಕ್ರಮ ಎಸಗಿದವರ ವಿರುದ್ಧ ಲಕ್ಷಾಂತರ ರೂಪಾಯಿ ದಂಡ ಹಾಕಿದ್ದಾರೆ. ಪ್ರಭಾವಿಗಳ ಒತ್ತಡದ ನಡುವೆಯೂ ಜಿಲ್ಲಾಧಿಕಾರಿಗಳು ಕೈಗೊಂಡ ದಿಟ್ಟ ನಿರ್ಧಾರಕ್ಕೆ ಕ್ಷೇತ್ರದ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾವಿರಾರು ವರ್ಷಗಳ ಇತಿಹಾಸವಿರುವ ಪ್ರಕೃತಿಯ ಮಧ್ಯೆ ಬೃಹದಾದ ಬಂಡೆಯ ಮೇಲೆ ನೆಲೆ ನಿಂತ ಆ ಈಶ್ವರನ ಸನ್ನಿಧಾನಕ್ಕೆ ಕಲ್ಲು ಗಣಿಗಾರಿಕೆಯಿಂದ ಸಂಚಕಾರ ಉಂಟಾಗಿತ್ತು. ಇದೀಗ ಕೊನೆಗೂ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಅಕ್ರಮವಾಗಿ ನಡೆಯುತ್ತಿದ್ದ ಮೂರು ಗಣಿಗಾರಿಕೆಗಳಿಗೂ ಬೀಗ ಜಡಿದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾರಿಂಜೇಶ್ವರ ದೇವಸ್ಥಾನ ಕರಾವಳಿಯ ಅತ್ಯಂತ ಪ್ರಸಿದ್ಧ ಹಾಗೂ ಪುರಾತನ ದೇವಸ್ಥಾನಗಳಲ್ಲಿ ಒಂದು. ಪ್ರಕೃತಿಯ ಮಡಿಲಲ್ಲಿ ಬೃಹದಾಕಾರವಾಗಿ ನಿಂತಿರುವ ಕಲ್ಲಿನ ಮೇಲೆ ಇರುವ ಈ ಕಾರಣಿಕ ದೇವಸ್ಥಾನದ ಆಸುಪಾಸಿನಲ್ಲಿ ಅಕ್ರಮ ಕಪ್ಪು ಕಲ್ಲು ಗಣಿಗಾರಿಕೆ ನಡೆಯುತಿತ್ತು. ದೇಗುಲದ ನಾಲ್ಕು ಸುತ್ತಲೂ ಕಲ್ಲು ಗಣಿಗಾರಿಕೆಯ ಸ್ಫೋಟದಿಂದ ದೇಗುಲ ಬಿರುಕು ಬಿಟ್ಟಿತ್ತು.
ಸ್ಫೋಟದ ಸಂದರ್ಭದಲ್ಲಿ ಭಗವಂತನ ವಿಗ್ರಹವೇ ಕಂಪನ ಆದಂತಾಗುತ್ತಿತ್ತು. ಹೀಗಾಗಿ ಕಾವಳ ಮೂಡೂರು ಗ್ರಾಮ ಮತ್ತು ಕಾವಳ ಪಡೂರು ಗ್ರಾಮಗಳಲ್ಲಿದ್ದ ಈ ಕಲ್ಲು ಗಣಿಗಾರಿಕೆ ವಿರುದ್ದ ಸ್ಥಳೀಯರು, ದೇವಸ್ಥಾನದ ಭಕ್ತಾದಿಗಳು ಬೃಹತ್ ಪ್ರತಿಭಟನೆ, ಹೋರಾಟ ನಡೆಸಿದ್ದರು. ಇದೀಗ ದೂರಿನ ಹಿನ್ನೆಲೆಯಲ್ಲಿ 3 ಕಪ್ಪು ಕಲ್ಲು ಗಣಿಗಾರಿಕೆಗೆ ಜಿಲ್ಲಾಡಳಿತ ಬೀಗ ಜಡಿದಿದೆ.