ಸಮಗ್ರ ನ್ಯೂಸ್: ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಯಾದ ಬೆನ್ನಲ್ಲೇ ‘ದೇಶಭಕ್ತರ ಕುಟುಂಬದ ಸದಸ್ಯರಿಗೆ ಎಂಎಲ್‌ಎ ಟಿಕೆಟ್ ನೀಡಬೇಕು’ ಎಂಬ ಹೊಸ ಅಭಿಯಾನವನ್ನು ದೇಶಭಕ್ತ ಹಿಂದೂ ಕಾರ್ಯಕರ್ತರ ಹೆಸರಿನಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿದ್ದು, ಬಿಜೆಪಿಗೆ ಮುಜುಗರ ತಂದಿದೆ.
‘ಹರ್ಷ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟಿದ್ದಾನೆ. ಅವರ ಕುಟುಂಬದವರಿಗೆ ಸಾಂತ್ವನ, ಭಾಷಣ, ಆರ್ಥಿಕ ನೆರವು ನೀಡಿದರಷ್ಟೇ ಸಾಲದು. ಅವರ ತಾಯಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು. ದೇಶಭಕ್ತನ ಮನೆಯಿಂದ ಒಬ್ಬರು ಎಂಎಲ್‌ಎ ಹುಟ್ಟಿಬರಲಿ. ಇಂತಹ ಸ್ಥಾನಗಳು ಈಶ್ವರಪ್ಪ, ಯಡಿಯೂರಪ್ಪ ಅವರ ಕುಟುಂಬದವರಿಗಷ್ಟೇ ಮೀಸಲಾಗಬಾರದು. ನಮ್ಮ ಬೇಡಿಕೆ ಈಡೇರಿಸಿದರೆ ಬಿಜೆಪಿಗೊಂದು ಸಲಾಂ’ ಎಂದು ಪೋಸ್ಟರ್‌ಗಳನ್ನು ಶೇರ್ ಮಾಡಲಾಗುತ್ತಿದೆ.
ಇದುವರೆಗೂ ಹಿಂದೂಗಳ ಮತಗಳನ್ನು ಪಡೆದು ಅಧಿಕಾರ ಅನುಭವಿಸಿದವರಿಗೇ ಮತ್ತೆ ಅಧಿಕಾರ ನೀಡುವುದು ಬೇಡ. ದೇಶಭಕ್ತರ ಕುಟುಂಬದ ಸದಸ್ಯರಿಗೆ ಅವಕಾಶ ದೊರೆಯಬೇಕು. ಕೊಲೆಯಾಗುತ್ತಿರುವುದು ಶಾಸಕ, ಸಂಸದ, ಸಚಿವರ ಮಕ್ಕಳಲ್ಲ. ಬಡವರ ಮಕ್ಕಳು. ಹಿಂದುತ್ವಕ್ಕಾಗಿ ಹೋರಾಡುವ ಬಡವರ ಕುಟುಂಬಗಳಿಗೆ ಇನ್ನಾದರೂ ಗೌರವ, ಸ್ಥಾನಮಾನ ಸಿಗಬೇಕು ಎಂಬಂತಹ ಪೋಸ್ಟರ್‌ಗಳು ಹರಿದಾಡುತ್ತಿರುವುದು ಬಿಜೆಪಿ ನಾಯಕರಿಗೆ ಇರಿಸುಮುರಿಸು ಮೂಡಿಸಿದೆ.