ಸಮಗ್ರ ನ್ಯೂಸ್: ಮಣಪ್ಪುರಂ ಗೋಲ್ಡ್ ಲೋನ್ ಸಿಬ್ಬಂದಿಯ ಎಡವಟ್ಟಿನಿಂದ ಯಾರದೋ ಬಂಗಾರ ಮತ್ಯಾರಿಗೋ ಹಸ್ತಾಂತರವಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಜಗದೇವಿ ಮಾಳಿ ಕುಟುಂಬಸ್ಥರು ಇವರು ಕಳೆದ ವರ್ಷ ಮಣಪ್ಪುರಂ ಗೋಲ್ಡ್ ಲೋನ್‍ನಲ್ಲಿ, 37ಗ್ರಾಂ ಬಂಗಾರವನ್ನು ಇಟ್ಟು ಸಾಲ ಪಡೆದಿದ್ದರು. ಪಡೆದ ಸಾಲಕ್ಕೆ ಪ್ರತಿ ತಿಂಗಳು ಸಾಲದ ಕಂತನ್ನು ಸಹ ಪಾವತಿ ಮಾಡುತ್ತಿದ್ದರು.
ಆದರೆ ಕಳೆದ ಮೂರು ತಿಂಗಳಿನಿಂದ ಕೆಲಸದ ನಿಮಿತ್ತ ಸೊಲ್ಲಾಪುರ ಹೋಗಿದ್ದ ಈ ಕುಟುಂಬ ಬಡ್ಡಿ ಹಾಗೂ ಸಾಲದ ಪಾವತಿ ಮಾಡಿರಲಿಲ್ಲ. ಈಗ ಹಳೆಯ ಸಾಲವನ್ನು ವಜಾ ಮಾಡಿ ಬಂಗಾರ ಪಡೆಯಲು ಮತ್ತೆ, ಗೊಲ್ಡ್ ಲೋನ್ ಕಚೇರಿಗೆ ಬಂದಿದ್ದಾರೆ.
ಆದರೆ ಅಲ್ಲಿನ ಸಿಬ್ಬಂದಿ ನಿಮ್ಮ ಬಂಗಾರವನ್ನು ಈಗಾಗಲೇ ಯಾರೋ ಬಿಡಿಸಿಕೊಂಡು ಹೋಗಿದ್ದಾರೆ ಎಂದು ಹೇಳಿ ಈ ಕುಟುಂಬಕ್ಕೆ ಶಾಕ್ ಕೊಟ್ಟಿದ್ದಾರೆ. ಇವರ ಹೆಸರಿನಲ್ಲಿ ಇದ್ದ ಬಂಗಾರವನ್ನು ಯಾರಿಗೂ ಅಪರಿಚಿತರಿಗೆ ಬಂಗಾರವನ್ನು ಕೊಟ್ಟಿದ್ದು, ಬಡ ಕುಟುಂಬಕ್ಕೆ ಭರ ಸಿಡಿಲು ಬಡಿದಂತಾಗಿದೆ.
ತಮ್ಮ ಬಂಗಾರವನ್ನು ಯಾರಿಗೊ ಕೊಟ್ಟಿರುವ ಸಿಬ್ಬಂದಿಯ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಬಾಂಡ್ ನಮ್ಮ ಹತ್ತಿರ ಇದ್ದರೂ ಅದು ಹೇಗೆ ನಮ್ಮ ಬಂಗಾರವನ್ನು ಬೇರೆಯವರಿಗೆ ಹಸ್ತಾಂತರ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಈ ಬಗ್ಗೆ ಪೊಲೀಸರು ಸಿಬ್ಬಂದಿ ವಿಚಾರಿಸಿದಾಗ, ಈ ಹಿಂದೆ ಇದ್ದ ಮ್ಯಾನೇಜರ್ ಅವರ ಅಧಿಕಾರ ಅವಧಿಯಲ್ಲಿ ಆಗಿದ್ದು, ಇದರ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ ಎಂದು ಕೈ ಚೆಲ್ಲುತ್ತಿದ್ದಾರೆ. ಅಲ್ಲದೇ ನಮ್ಮ ಬಂಗಾರ ನಮಗೆ ಬೇಕು ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.