ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚಿದ್ದು, ಇಬ್ಬರ ಹೆಸರನ್ನು ಬಹಿರಂಗಪಡಿಸಿದೆ. ಕೊಲೆಗೆ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕೊಲೆ ಪ್ರಕರಣದಲ್ಲಿ ಐವರು ಭಾಗಿಯಾಗಿದ್ದಾರೆಂಬ ಮಾಹಿತಿ ಇದೆ. ಶಿವಮೊಗ್ಗ ಬುದ್ಧನಗರದ ಖಾಸಿಫ್ (30), ಜೆಪಿ ನಗರದ ಸೈಯದ್ ನದೀಂ (20) ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ವರದಿಗಳ ಪ್ರಕಾರ ಐವರನ್ನೂ ವಶಕ್ಕೆ ಪಡೆದಿದ್ದು, ಇಬ್ಬರ ಹೆಸರನ್ನು ಮಾತ್ರ ಬಹಿರಂಗಪಡಿಸಲಾಗಿದೆ.
ವಾತಾವರಣ ತಿಳಿಯಾಗದ ಕಾರಣ ಬುಧವಾರ ಬೆಳಗಿನ ಜಾವ 6 ಗಂಟೆಯತನನ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಡಾ.ಸೆಲ್ಪಮಣಿ ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಇಂದು ಕೂಡ ರಜೆ ಘೋಷಿಸಲಾಗಿದೆ.
ಮೃತನ ಸಹೋದರಿ ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಡಿಯೊ ವೈರಲ್ ಆಗಿದ್ದು, “ಹಿಂದೂ, ಹಿಂದುತ್ವ ಎಂದಿದ್ದಕ್ಕೆ ನನ್ನ ತಮ್ಮ ಆ ರೀತಿಯಲ್ಲಿ ಬಿದ್ದಿದ್ದಾರೆ. ನನ್ನೆಲ್ಲ ಹಿಂದೂ, ಮುಸ್ಲಿಂ ಸಹೋದರರಿಗೆ ಕೇಳಿಕೊಳ್ಳುತ್ತೇನೆ. ಅಪ್ಪ ಅಮ್ಮನಿಗೆ ಒಳ್ಳೆಯ ಮಕ್ಕಳಾಗಿರಿ, ಇದನ್ನೆಲ್ಲ ಮಾಡಿಕೊಳ್ಳಬೇಡಿ” ಎಂದು ಮನವಿ ಮಾಡಿದ್ದಾರೆ.