ಶಿವಮೊಗ್ಗ : ಅನ್ಯಕೋಮಿನ ಗುಂಪೊಂದು ಯುವಕನೋರ್ವನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಶಿವಮೊಗ್ಗ ನಗರದ ಸೀಗೆಹಟ್ಟಿಯಲ್ಲಿ ನಡೆದಿದೆ.

ಕೊಲೆಯಾದ ಯುವಕನನ್ನು ಬಜರಂಗದಳದ ಕಾರ್ಯಕರ್ತ ಹರ್ಷ ಎಂದು ಗುರುತಿಸಲಾಗಿದೆ. ಹರ್ಷ ಕ್ಯಾಂಟೀನ್ ಬಳಿ ಟೀ ಕುಡಿಯುತ್ತಾ ನಿಂತಿದ್ದ ವೇಳೆ ಕಾರಿನಲ್ಲಿ ಬಂದ ಯುವಕರ ಗುಂಪು ಏಕಾಏಕಿ ಹರ್ಷನ ಮೇಲೆ ದಾಳಿ ನಡೆಸಿದೆ. ನಂತರ ದಾಳಿ ನಡೆಸಿದ ತಂಡ ಸ್ಥಳದಿಂದ ಪರಾರಿಯಾಗಿದೆ.
ಈ ವೇಳೆ ಹರ್ಷ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ನಂತರ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಹರ್ಷ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಎರಡು ಕೋಮಿನ ಯುವಕರ ಗುಂಪು ಮೆಗ್ಗಾನ್ ಆಸ್ಪತ್ರೆ ಬಳಿ ಜಮಾಯಿಸಿತು. ಹೀಗಾಗಿ ಮೆಗ್ಗಾನ್ ಆಸ್ಪತ್ರೆ ಬಳಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಇದೀಗ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಪರಿಸ್ಥಿತಿ ನಿಯಂತ್ರಿಸಲು ಗುಂಪುಗೂಡಿದ್ದ ಯುವಕರನ್ನು ಪೊಲೀಸರು ಮನೆಯತ್ತ ವಾಪಸ್ ಕಳುಹಿಸಿದ್ದಾರೆ ಮತ್ತು ಮುಂಜಾಗ್ರತಾ ಕ್ರಮವಾಗಿ ತಕ್ಷಣದಿಂದಲೇ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಗರದ ಹಲವು ಕಡೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸದ್ಯ ಘಟನೆ ಕುರಿತು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.