ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ವಿಪಕ್ಷ ನಾಯಕ ಬಿ.ಕೆ.ಹರಿ ಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, ನಳೀನ್ ಕುಮಾರ್ ಕಟೀಲ್ ನೇರವಾಗಿ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಬೆದರಿಕೆಗಳಿಗೆ ಹೆದರುವವರಲ್ಲ. ನಮ್ಮ ಪೂರ್ವಜರೇ ಬ್ರಿಟೀಷರ ಗುಂಡಿಗೆ ಹೆದರಿಲ್ಲ ಇನ್ನು ಬಿಜೆಪಿ ನಾಯಕರ ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದರು. ಇನ್ನೂ ಬಿಜೆಪಿ ನಾಯಕರ ನಕಲಿ ರಾಷ್ಟ್ರ ಭಕ್ತಿಗೆ ಹೆದರಬೇಕಿಲ್ಲ. ಈ ವಿಚಾರವನ್ನು ಇಲ್ಲಿಗೆ ಬಿಡುವುದೂ ಇಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇವೆ. ಒಂದು ಪಕ್ಷದ ರಾಜ್ಯಾಧ್ಯಕ್ಷರಾಗಿ ಜೀವ ಬೆದರಿಕೆಯೊಡ್ಡಿ ಗೂಂಡಾ ವರ್ತನೆ ತೋರುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಈಶ್ವರಪ್ಪರನ್ನು ಸಂಪುಟದಿಂದ ವಜಾ ಮಾಡುವಂತೆ ಆಗ್ರಹಿಸಿ ಸೋಮವಾರದವರೆಗೂ ಅಹೋರಾತ್ರಿ ಧರಣಿ ಮುಂದುವರಿಸುತ್ತೇವೆ. ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ಕೊಡುವವರೆಗೂ ಹಗಲಿರುಳು ಧರಣಿ ಮುಂದುವರಿಯಲಿದೆ ಎಂದು ರಾಥೋಡ್ ಹೇಳಿದ್ದಾರೆ. ಇದೇ ವೇಳೆ, ಹರಿಪ್ರಸಾದ್ ಹಾಗೂ ಪಕ್ಷದ ಕಾರ್ಯಾಧ್ಯಕ್ಷ ಸಲೀಂ ಅವರಿಗೆ ರಕ್ಷಣೆ ಕೊಡಬೇಕೆಂದು ರಾಠೋಡ್ ಅವರು ಸಭಾಪತಿಗೆ ಮನವಿ ಮಾಡಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಹರಿಪ್ರಸಾದ್, ಪ್ರತಿಪಕ್ಷ ಎತ್ತಿದ ಪ್ರಶ್ನೆಗಳಿಗೆ ಉತ್ತರ ಕೊಡದ ಸಾಮರ್ಥ್ಯ ಇಲ್ಲದವರು ವೈಯಕ್ತಿಕ ಆರೋಪ, ಬೆದರಿಕೆ ದಾರಿ ಹಿಡಿಯುತ್ತಾರೆ. ಇಂತಹ ಬೆದರಿಕೆಗಳಿಗೆ ನಾವು ಜಗ್ಗಲ್ಲ ಎಂದು ಅವರು ಗುಡುಗಿದ್ದಾರೆ.