ಸಮಗ್ರ ನ್ಯೂಸ್ ಡೆಸ್ಕ್: ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಿಜಾಬ್ ಧರಿಸಬಹುದು ಎಂದು ಸರ್ಕಾರದ ಆದೇಶ ಇದ್ದರೂ, ಸುಳ್ಯದ ಎನ್.ಎಂ.ಸಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ ಘಟನೆ ನಡೆದಿದೆ. ಕಾಲೇಜಿನ ಮೈದಾನದಲ್ಲಿ ಬಿರುಬಿಸಿಲಿನಲ್ಲಿ ವಿದ್ಯಾರ್ಥಿನಿಗಳು ಇರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವರದಿಗಾರಿಕೆ ಮಾಡಲು ತೆರಳಿದ ಸುಳ್ಯದ ಪತ್ರಿಕಾ ವರದಿಗಾರರಾದ ಹಸೈನಾರ್ ಜಯನಗರ ಮೇಲೆ ಕಾಲೇಜಿನ ಸಿಬ್ಬಂದಿ ಹಲ್ಲೆಗೆ ಯತ್ನಿಸಿ, ತಳ್ಳಾಟ ನಡೆಸಿದ ಘಟನೆ ನಡೆದಿದೆ.
ಕಾಲೇಜು ಪುನರಾರಂಭವಾದ ಇಂದು ಸುಳ್ಯದ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಿದ್ದರು. ಆದರೆ ಕಾಲೇಜಿಗೆ ಆ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ್ದು, ವಿದ್ಯಾರ್ಥಿಗಳು ಬಿಸಿಲಲ್ಲೇ ನಿಂತಿದ್ದರು. ಇದನ್ನು ವರದಿ ಮಾಡಲು ತೆರಳಿದ್ದ ಸ್ಥಳೀಯ ಪತ್ರಿಕೆಯೊಂದರ ಪತ್ರಕರ್ತ ಹಸೈನಾರ್ ಎಂಬವರಿಗೆ ಕಾಲೇಜಿನ ಸಿಬ್ಬಂದಿ ಫೋಟೋ ತೆಗೆಯದಂತೆ ಹಾಗೂ ತೆಗೆದ ಫೋಟೊ ಅಳಿಸುವಂತೆ ತಾಕೀತು ಮಾಡಿದ್ದಾರೆನ್ನಲಾಗಿದೆ. ಈ ವೇಳೆ ತಳ್ಳಾಟ ನಡೆದಿದ್ದು ಕಾಲೇಜು ಸಿಬ್ಬಂದಿ ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಘಟನೆಯನ್ನು ಅಂಬೇಡ್ಕರ್ ರಕ್ಷಣಾ ವೇದಿಕೆ ಜಿಲ್ಲಾದ್ಯಕ್ಷ ಸುಂದರ ಪಾಟಾಜೆ ಖಂಡಿಸಿದ್ದಾರೆ.