ಬೆಂಗಳೂರು: ಹಿಜಾಬ್ ಧರಿಸಿ ಬರದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದರೂ, ಕೋರ್ಟ್ ಆದೇಶಕ್ಕೆ ಡೋಂಟ್ ಕೇರ್ ಎನ್ನುವಂತೆ ವಿದ್ಯಾರ್ಥಿಗಳು ಇಂದು ಕೂಡ ಹಿಜಾಬ್ ಧರಿಸಿಯೇ ಕಾಲೇಜುಗಳಿಗೆ ಆಗಮಿಸಿದ್ದಾರೆ.
ಹಿಜಾಬ್ ಧರಿಸಿ ಬಂದಂತ ವಿದ್ಯಾರ್ಥಿಗಳು ಪ್ರಾಂಶುಪಾಲರು, ಉಪನ್ಯಾಸಕರೊಂದಿಗೆ ವಾಗ್ವಾದ ನಡೆಸಿರೋದು, ಗಲಾಟೆ ಮಾಡಿರೋ ಘಟನೆಗಳು ರಾಜ್ಯಾಧ್ಯಂತ ವರದಿಯಾಗಿದೆ. ಈ ಮೂಲಕ ರಾಜ್ಯದಲ್ಲಿ ಇಂದು ಆರಂಭಗೊಂಡಂತ ಪಿಯು, ಪದವಿ ಕಾಲೇಜು ಮೊದಲ ದಿನವೇ ಹಿಜಾಬ್ ಸಂಘರ್ಷ ತಾರಕಕ್ಕೇರಿದೆ.
ವಿಜಯಪುರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದಂತ ವಿದ್ಯಾರ್ಥಿಗಳು, ತರಗತಿಗೂ ಹಾಜರಾದರು. ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಹಿಜಾಬ್ ಧರಿಸಬಾರದು. ತೆಗೆಯಿರಿ ಎಂದಂತ ಪ್ರಾಂಶುಪಾಲರ ಜೊತೆಗೆ ವಾಗ್ವಾದಕ್ಕೆ ವಿದ್ಯಾರ್ಥಿನಿಯರು ಇಳಿದರು. ನಾವು ಹಿಜಾಬ್ ಧರಿಸಿಯೇ ಕಾಲೇಜಿಗೆ ಬರೋದು. ಯಾವುದೇ ಕಾರಣಕ್ಕೂ ತೆಗೆಯೋದಿಲ್ಲ ಎಂಬುದಾಗಿ ಪ್ರತಿಭಟಿಸಿದರು.
ಮತ್ತೊಂದೆಡೆ ಬಳ್ಳಾರಿಯ ಸರಳಾದೇವಿ ಕಾಲೇಜಿನಲ್ಲಿಯೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಕಾಲೇಜಿಗೆ ಆಗಮಿಸಿದರು. ಹಿಜಾಬ್ ತೆಗೆಯುವಂತೆ ಸೂಚಿಸಿದಂತ ಕಾಲೇಜು ಸಿಬ್ಬಂದಿಗಳೊಂದಿಗೆ ವಾಗ್ವಾದಕ್ಕೂ ಇಳಿದರು. ಯಾವುದೇ ಕಾರಣಕ್ಕೂ ಕೋರ್ಟ್ ಅಂತಿಮ ಆದೇಶ ಬರೋವರೆಗೆ ಹಿಜಾಬ್ ತೆಗೆಯೋದಿಲ್ಲ ಎಂಬುದಾಗಿ ಖಡಕ್ ಉತ್ತರ ನೀಡಿದ್ದಾರೆ.
ಇನ್ನೂ ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹಿಜಾಬ್ ಧರಿಸಿ ಬಂದಂತ ವಿದ್ಯಾರ್ಥಿನಿಯರನ್ನು, ಹಿಜಾಬ್ ತೆಗೆಯುವಂತೆ ಸಿಬ್ಬಂದಿಗಳು ತಿಳಿಸಲಾಯಿತು. ಆದ್ರೇ ಬುರ್ಕಾ ಬೇಕಾದ್ರೆ ತೆಗೆಯುತ್ತೇವೆ. ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯೋದಿಲ್ಲ ಎಂಬುದಾಗಿ ಗಲಾಟೆ ನಡೆಸಿದ್ದಾರೆ.’
ಶಿವಮೊಗ್ಗದಲ್ಲಿಯೂ ಹಿಜಾಬ್ ಸಂಘರ್ಷ ತಾರಕಕ್ಕೇರಿದೆ. ಹಿಜಾಬ್ ಧರಿಸಿ ಡಿವಿಎಸ್ ಕಾಲೇಜಿಗೆ ಬಂತಂತ ವಿದ್ಯಾರ್ಥಿನಿಯರಿಗೆ ಸ್ವತಹ ಜಿಲ್ಲಾಧಿಕಾರಿ ಸೆಲ್ವಮಣಿಯವರು ಸೂಚಿಸಿದರೂ, ಹಿಜಾಬ್ ತೆಗೆಯೋದಿಲ್ಲ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ. ಅಲ್ಲದೇ ಹಿಜಾಬ್ ತೆಗೆಯದೇ ಇದ್ದರೇ ಮನೆಗೆ ವಾಪಾಸ್ ಹೋಗಿ ಎಂದಂತ ಕಾಲೇಜಿನ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಈ ಬಳಿಕ ಐವರು ವಿದ್ಯಾರ್ಥಿನಿಯರು ಮನೆಗೆ ವಾಪಾಸ್ ಮರಳಿದ್ದಾರೆ.
ಇದಲ್ಲದೇ ವಿವಿಧ ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ನಿಷೇಧಾಜ್ಞೆಯ ನಡುವೆಯೂ ಹಿಜಾಬ್ ಧರಿಸೋದಕ್ಕೆ ಅನುಮತಿ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಜೊತೆಗೆ ಕಾಲೇಜಿನ ಮುಂದೆ ಧರಣಿ ನಡೆಸುತ್ತಿರೋದು ಕಂಡು ಬಂದಿದೆ. ಹೀಗಾಗಿ ಪೊಲೀಸರು ಕಾಲೇಜಿಗೆ ಎಂಟ್ರಿ ಕೊಟ್ಟಿದ್ದು, ವಿದ್ಯಾರ್ಥಿನಿಯರನ್ನು ನಿಯಂತ್ರಿಸೋ ಕೆಲಸ ಮಾಡುತ್ತಿದ್ದಾರೆ.