ನವದೆಹಲಿ: ಸೆಲ್ಫಿ ತೆಗೆದುಕೊಳ್ಳುತ್ತಿದ್ದ ನಾಲ್ವರು ಯುವಕರಿಗೆ ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಮಂಗಳವಾರ ದೆಹಲಿಯ ಹೊರವಲಯದಲ್ಲಿರುವ ಗುರುಗ್ರಾಮ್‍ನಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೇ ಮೇಲ್ಸೇತುವೆ ಬಳಿ ನಡೆದಿದೆ.
ಮೃತರನ್ನು ದೇವಿಲಾಲ್ ಕಾಲೋನಿ ನಿವಾಸಿಗಳಾದ ಸಮೀರ್ (19), ಮೊಹಮ್ಮದ್ ಅನಸ್ (20), ಯೂಸುಫ್ ಅಲಿಯಾಸ್ ಭೋಲಾ (21) ಮತ್ತು ಯುವರಾಜ್ ಗೋಗಿಯಾ (18) ಎಂದು ಗುರುತಿಸಲಾಗಿದೆ. ಇವರಲ್ಲಿ ಒಬ್ಬ 9 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಮತ್ತೊಬ್ಬ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸರ್ಕಾರಿ ರೈಲ್ವೆ ಪೊಲೀಸ್ ಪ್ರಕಾರ, ದೆಹಲಿಯ ಸರಾಯ್ ರೋಹಿಲ್ಲಾದಿಂದ ಅಜ್ಮೀರ್‍ಗೆ ಹೋಗುವ ಜನ ಶತಾಬ್ದಿ ಎಕ್ಸ್‌ಪ್ರೇಸ್ ಗುರುಗಾಮ್ ರೈಲು ನಿಲ್ದಾಣದಿಂದ ಬಸಾಯಿ ರೈಲು ನಿಲ್ದಾಣದ ಕಡೆಗೆ ಚಲಿಸುತ್ತಿದ್ದಾಗ ಸಂಜೆ 5 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.
18 ರಿಂದ 21 ವರ್ಷ ವಯಸ್ಸಿನ ನಾಲ್ವರು ಯುವಕರು ರೈಲು ಸಮೀಪಿಸುತ್ತಿದ್ದಾಗ ಹಳಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ನಿಂತಿದ್ದರು. ರೈಲು ಸಾಕಷ್ಟು ಸಮೀಪ ಬಂದರು ಸಹ ಯುವಕರು ಫೋಟೋದಲ್ಲಿ ರೈಲು ಬೇಕು ಎಂದು ಕದಲದೆ ಅಲ್ಲಿಯೇ ನಿಂತಿದ್ದರು.
ಸೆಲ್ಫಿ ತೆಗೆದುಕೊಳ್ಳುತ್ತಿದ್ದ ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರೈಲು ಚಾಲಕನಿಂದ ಮಾಹಿತಿ ಪಡೆದ ತಕ್ಷಣ, ಜಿಆರ್‍ಪಿ ಪೊಲೀಸ್ ಠಾಣೆಯ ತಂಡವು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತನೊಬ್ಬನ ತಂದೆ ತರಕಾರಿ ಮಾರಾಟಗಾರರಾಗಿದ್ದಾರೆ.