ಶಿವಮೊಗ್ಗ: ನಿನ್ನೆ ಕೆಲ ವಿದ್ಯಾರ್ಥಿನಿಯರು ನಮಗೆ ಪರೀಕ್ಷೆ ಮುಖ್ಯವಲ್ಲ, ಹಿಜಬ್ ಮುಖ್ಯ ಎಂದು ಹೇಳಿ ತರಗತಿಯಿಂದ ಹೋರಟಿದ್ದ ಹಿಜಬ್ ವಿವಾದ ಇಂದು ಸಹ ಮುಂದುವರಿದಿದ್ದು, ಇಬ್ಬರು ವಿದ್ಯಾರ್ಥಿನಿಯರು ತರಗತಿಯನ್ನು ಬಹಿಷ್ಕರಿಸಿದ್ದಾರೆ.
ಶಿವಮೊಗ್ಗದ ಬಿ.ಎಚ್.ರಸ್ತೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇಂದು ಸಹ 10 ನೇ ತರಗತಿಗೆ ತಾಲೂಕು ಮಟ್ಟದ ಪೂರ್ವಭಾವಿ ಸಿದ್ಧತಾ ಪರೀಕ್ಷೆ ಇತ್ತು. ವಿಜ್ಞಾನ ಪರೀಕ್ಷೆ ನಡೆಯುತ್ತಿದೆ. ಹಿಜಬ್, ಬುರ್ಖಾ ಧರಿಸಿ 9 ಹಾಗೂ 10ನೇ ತರಗತಿ ವಿದ್ಯಾರ್ಥಿನಿ ಬಂದಿದ್ದರು. ಆದರೆ ಹಿಜಬ್, ಬುರ್ಖಾ ಧರಿಸಿ ತರಗತಿಯಲ್ಲಿ ಕುಳಿತುಕೊಳ್ಳಲು ಶಿಕ್ಷಕರ ನಿರಾಕರಣೆ ಮಾಡಿದರು. ಇದರಿಂದಾಗಿ ವಿದ್ಯಾರ್ಥಿನಿಯರು ಶಾಲೆಯಿಂದ ಹೊರಗೆ ಹೋಗಿದ್ದಾರೆ.
ನಿನ್ನೆ ಸಹ 10ನೇ ತರಗತಿಗೆ ತಾಲೂಕು ಮಟ್ಟದ ಪೂರ್ವಭಾವಿ ಸಿದ್ಧತಾ ಪರೀಕ್ಷೆ ಸಹ ಇತ್ತು. ತರಗತಿಗೆ ಹಾಜರಾಗಿದ್ದ ವಿದ್ಯಾರ್ಥಿನಿಯರಿಗೆ ಶಿಕ್ಷಕರು ಹಿಜಬ್, ಬುರ್ಖಾ ತೆಗೆಯುವಂತೆ ಸೂಚಿಸಿದ್ದರು. ಕೆಲ ವಿದ್ಯಾರ್ಥಿನಿಯರು ಬುರ್ಖಾ, ಹಿಜಬ್ ತೆಗೆದಿಟ್ಟು ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಪರೀಕ್ಷೆ ಆರಂಭಕ್ಕೂ ಮೊದಲು ಕೆಲವು ವಿದ್ಯಾರ್ಥಿನಿಯರು ನಾವು ಹಿಜಬ್ ಧರಿಸಿಯೇ ಪರೀಕ್ಷೆ ಬರೆಯುತ್ತೇವೆ. ಇಲ್ಲದಿದ್ದರೆ ಪರೀಕ್ಷೆ ಬರೆಯುವುದಿಲ್ಲ ಎಂದು ತಗಾದೆ ತೆಗೆದಿದ್ದಾರೆ.
ಇದಕ್ಕೆ ಒಪ್ಪದ ಶಿಕ್ಷಕರು ಎಲ್ಲರೂ ಕರ್ನಾಟಕ ಹೈಕೋರ್ಟ್ ಆದೇಶ ಪಾಲನೆ ಮಾಡಬೇಕು. ಹಿಜಬ್ ತೆಗೆದರೆ ತರಗತಿಯಲ್ಲಿ ಇರಿ, ಇಲ್ಲದಿದ್ದರೆ ಹೊರಗೆ ಹೋಗಿ ಎಂದಿದ್ದಾರೆ. ವಿದ್ಯಾರ್ಥಿನಿಯರು ಮರು ಮಾತನಾಡದೇ ನಾವು ಬೇಕಾದರೆ ಪರೀಕ್ಷೆ ಬಹಿಷ್ಕರಿಸುತ್ತೇವೆ. ಹಿಜಬ್ ತೆಗೆಯುವುದಿಲ್ಲ. ನಮಗೆ ಪರೀಕ್ಷೆ ಮುಖ್ಯವಲ್ಲ, ಧರ್ಮ ಮುಖ್ಯ ಎಂದು ಶಾಲೆಯಿಂದ ಮನೆಗೆ ತೆರಳಿದ್ದಾರೆ. ವಿದ್ಯಾರ್ಥಿನಿಯರ ಪರೀಕ್ಷೆ ಬಹಿಷ್ಕಾರಕ್ಕೆ ಪೋಷಕರು ಸಹ ಬೆಂಬಲ ವ್ಯಕ್ತಪಡಿಸಿದ್ದರು