ಉಳ್ಳಾಲ: ಮೂರುಕಾಸಿನ ಬೆಲೆಯಿಲ್ಲದವರು ನನಗೆ ಬುದ್ಧಿ ಹೇಳಬೇಡಿ, ಬೇರೆ ಧರ್ಮದವರ ಕಾರ್ಯಕ್ರಮಕ್ಕೆ ಹೋದಾಗ ತಪ್ಪಾದಲ್ಲಿ ಅದನ್ನು ತಿದ್ದಲು ಉಲೇಮಾಗಳು, ಖಾಝಿಗಳು ಇದ್ದಾರೆ, ಅವರು ಕೊಡುವ ಸಲಹೆ ಸೂಚನೆಗಳನ್ನು ಒಪ್ಪಲು ನಾನು ತಯಾರಿದ್ದೇನೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ ಖಾದರ್ ಕಿಡಿಕಾರಿದ್ದಾರೆ.
ಮಂಜನಾಡಿ ಕಾಂಗ್ರೆಸ್ ಗ್ರಾಮ ಸಮಿತಿ ಮತ್ತು ವಿವಿಧ ಕಾಂಗ್ರೆಸ್ ಗ್ರಾಮ ಘಟಕಗಳ ಆಶ್ರಯದಲ್ಲಿ ವಿಧಾನಸಭೆಯ ವಿಪಕ್ಷ ಉಪನಾಯಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ನಡೆದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ಬೇರೆ ಧರ್ಮದ ಕಾರ್ಯಕ್ರಮಕ್ಕೆ ಹೋದಾಗ, ಅದರ ಬಗ್ಗೆ ಇಲ್ಲಸಲ್ಲದ ಪ್ರಚಾರ ಮಾಡುವವರಿದ್ದಾರೆ, ಅಲ್ಲಿ ಏನಾದರೂ ಹೆಚ್ಚು ಕಮ್ಮಿಯಾದಲ್ಲಿ ಅದನ್ನು ತಿಳಿಸಲು ಉಲೇಮಾಗಳು, ಖಾಝಿಗಳು ಇದ್ದಾರೆ, ಅವರು ಕೊಡುವ ಸಲಹೆ ಸೂಚನೆಗಳನ್ನು ಒಪ್ಪಲು ನಾನು ತಯಾರಿದ್ದೇನೆ, ಆದರೆ ಲೋಫರ್ ಗಳು ಹಾಗೂ ಮೂರುಕಾಸಿನ ಬೆಲೆಯಿಲ್ಲದವರು ನನ್ನ ಬಗ್ಗೆ ಮಾತನಾಡುವ ಅವಶ್ಯಕತೆಯಿಲ್ಲ. ಕೆಲವರಿಗೆ ಹಸಿರು ಕಂಡರೆ ಆಗುವುದಿಲ್ಲ, ಇನ್ನು ಕೆಲವರಿಗೆ ಕೇಸರಿ ಕಂಡರೆ ಆಗುವುದಿಲ್ಲ.ಮುನುಷ್ಯತ್ವ ಇರುವ ಮನುಷ್ಯರನ್ನು ಕಂಡರೆ ಆಗದವರು ಮನುಷ್ಯ ನಿರ್ಮಿಸಿದ ಬಣ್ಣಕ್ಕೆ ಬೆಲೆ ಕೊಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಕಾಂಗ್ರೆಸ್ ಪಕ್ಷದ ವಿರುದ್ಧ ಆಗುವ ಅಪಪ್ರಚಾರಗಳ ಕುರಿತು ಕಾರ್ಯಕರ್ತರು ಸೂಕ್ತ ಉತ್ತರ ಕೊಡಬೇಕಿದೆ. ಕಾಂಗ್ರೆಸ್ ಸಿದ್ಧಾಂತ ಉಪಕಾರ ಮಾಡುವ ಆಲೋಚನೆಯಲ್ಲದೆ, ಉಪದ್ರ ಮಾಡುವ ಬುದ್ದಿಯಲ್ಲ. ಉಳ್ಳಾಲ ಉರೂಸ್ ಗೆ ಸರಕಾರದ ಕೋಟ್ಯಂತರ ಅನುದಾನವನ್ನು ಒದಗಿಸಿ ಸಂಭ್ರಮದಿಂದ ಕಾರ್ಯಕ್ರಮ ನಡೆಯುತ್ತಿದೆ, ಇನ್ನೆರಡು ದಿನಗಳಲ್ಲಿ ತೊಕ್ಕೊಟ್ಟು ಕೊರಗಜ್ಜನ ಕಟ್ಟೆಯಲ್ಲಿ ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ರಸ್ತೆ ಬಂದ್ ಆಗುತ್ತದೆ, ಒಟ್ಟಿನಲ್ಲಿ ಸೌಹಾರ್ದತೆಯ ಕೊಂಡಿಯಾಗಿ ಕಾಂಗ್ರೆಸ್ ಕಾರ್ಯಾಚರಿಸುತ್ತಿದೆ ಎಂದರು.