ಸಮಗ್ರ ನ್ಯೂಸ್ ಡೆಸ್ಕ್: ದೇಶದಲ್ಲಿ ಅತಿ ಹೆಚ್ಚು ರೇಪ್ ಪ್ರಕರಣಗಳು ನಡೆಯುತ್ತಿದ್ದು, ಮುಖದ ಮೇಲೆ ಹಿಜಾಬ್ ಪರದೆ ಹಾಕಿಕೊಳ್ಳದೆ ಇರೋದೇ ಇದಕ್ಕೆ ಕಾರಣ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಹಿಜಾಬ್ ಸಮರ್ಥನೆ ಮಾಡಿಕೊಳ್ಳಲು ಹೋಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹಿಜಾಬ್ ಅಂದ್ರೆ ಘೋಶ್ವಾ ಪರದೆ ಅಂತ ಕರಿತೀವಿ. ಹೆಣ್ಣು ಮಕ್ಕಳ ಸೌಂದರ್ಯ ಕಾಣದಿರಲಿ ಎಂದು ಈ ಪರದೆಯನ್ನು ಹಾಕಿಕೊಳ್ಳಲಾಗುತ್ತೆ. ಬಹಳ ವರ್ಷಗಳ ಹಿಂದಿನಿಂದಲೂ ಈ ಪದ್ಧತಿ ಇದೆ. ಸ್ವಾತಂತ್ರ್ಯ ಪೂರ್ವದಿಂದಲೂ ಹಿಜಾಬ್ ಹಾಕಿಕೊಳ್ಳೋ ಪದ್ದತಿಯಿದೆ. ಈ ರೀತಿ ಪರದೆ ಹಾಕಿಕೊಳ್ಳದೆ ಇರೋದು ರೇಪ್ ಗೆ ಕಾರಣವಾಗುತ್ತೆ. ವಿಶ್ವದಲ್ಲೇ ಹಿಂದೂಸ್ತಾನದಲ್ಲಿ ಅತಿ ಹೆಚ್ಚು ರೇಪ್ ಪ್ರಕರಣಗಳು ನಡೆಯುತ್ತಿವೆ. ಈ ರೀತಿ ಪರದೆ ಹಾಕಿಕೊಳ್ಳದೆ ಇರೋದೇ ಇದಕ್ಕೆ ಮುಖ್ಯ ಕಾರಣ ಎಂದು ಜಮೀರ್ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.
ಹಿಜಾಬ್ ವಿವಾದ ಬಿಜೆಪಿವರು ಮಾಡಿದ ರಾಜಕೀಯ ಪಿತೂರಿ:
ಮುಸ್ಲಿಂ ಯುವತಿಯರು ಹಿಜಾಬ್ ಧರಿಸೋದು ನಿನ್ನೆ ಇವತ್ತಿನದಲ್ಲ. ತುಂಬ ಹಿಂದಿನಿಂದಲೂ ಶಾಲಾ – ಕಾಲೇಜುಗಳಿಗೆ ಹಾಕಿಕೊಂಡು ಬರ್ತಿದಾರೆ. ಆದರೆ ಬಿಜೆಪಿ ಇದನ್ನು ರಾಜಕೀಕರಣ ಮಾಡಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದೆ ಎಂದು ಜಮೀರ್ ಅಹ್ಮದ್ ಖಾನ್ ಆರೋಪಿಸಿದ್ದಾರೆ. ಪ್ರಕರಣ ನ್ಯಾಯಲಯದಲ್ಲಿರುವ ಕಾರಣ ನಾನೇನು ಪ್ರತಿಕ್ರಿಯೆ ನೀಡಲ್ಲ. ಹಿಜಾಬ್ ವಿವಾದ ಬಿಜೆಪಿವರು ಮಾಡಿದ ರಾಜಕೀಯ ಪಿತೂರಿಯಾಗಿದೆ.
ಸಮಾಜದಲ್ಲಿ ಹಿಂದೂ ಮುಸ್ಲಿಂ ಅಂತ ಗೊಂದಲ ಸೃಷ್ಟಿ ಮಾಡ್ತಿದ್ದಾರೆ. ಅವರು ಯಾವತ್ತೂ ತಮ್ಮ ಕೆಲಸ ಆಧಾರದ ಮೇಲೆ ಮತ ಕೇಳಲ್ಲ. ಬದಲಿಗೆ ಇಂತಹ ಗೊಂದಲ ಸೃಷ್ಟಿ ಮಾಡೋದೆ ಅವರ ಕೆಲಸವಾಗಿದೆ. ನ್ಯಾಯಾಲಯದ ತೀರ್ಪು ನಮ್ಮ ಪರವಾಗಿ ಬರುತ್ತೆ ಅನ್ನೋ ವಿಶ್ವಾಸವಿದೆ. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ಬದ್ಧರಾಗಿರಬೇಕಾಗುತ್ತೆ. ರಾಮ ಮಂದಿರ ತೀರ್ಪನ್ನ ನಾವೂ ಸ್ವಾಗತಿಸಿದ್ದೆವು. ಇದನ್ನ ಹಾಗೆಯೇ ಸ್ವಾಗತಿಸುತ್ತೇವೆ. ಪಕ್ಷ ಅಧಿಕಾರಕ್ಕೆ ತರೋ ದೃಷ್ಟಿಯಿಟ್ಟುಕೊಂಡು ರಾಜ್ಯ ಪ್ರವಾಸ ಕೈಗೊಂಡಿದ್ದೇನೆ ಎಂದರು.