ಸಮಗ್ರ ನ್ಯೂಸ್ ಡೆಸ್ಕ್: ರಾಜ್ಯದಲ್ಲಿ ಹಿಜಾಬ್- ಕೇಸರಿ ಶಾಲು ಗೊಂದಲ ಜೀವಂತವಾಗಿರುವಾಗಲೇ ಇನ್ನೊಂದು ಇದೇ ರೀತಿಯ ಪ್ರಕರಣ ಸಮಾಜದಲ್ಲಿ ಮತ್ತೆ ಅಶಾಂತಿ ಮೂಡಿಸಲು ಕಾರಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಂಕತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಶುಕ್ರವಾರದ ನಮಾಜ್ ಮಾಡಿರುವ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸದ್ಯಕ್ಕೆ ಅಧಿಕಾರಿಗಳು ವಿವಾದಕ್ಕೆ ತೆರೆ ಎಳೆದಿದ್ದಾರೆ. ಆದರೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹುಟ್ಟೂರಿನಲ್ಲಿನ ಅಂಕತ್ತಡ್ಕದ ಸರಕಾರಿ ಶಾಲೆಯಲ್ಲಿ ಕಳೆದ ಮೂರು ವಾರಗಳಿಂದ ಪ್ರತೀ ಶುಕ್ರವಾರ 6 ಮತ್ತು 7 ತರಗತಿಯಲ್ಲಿ ಕಲಿಯುತ್ತಿರುವ ಮೂವರು ವಿದ್ಯಾರ್ಥಿಗಳು ಶಾಲಾ ಕೊಠಡಿಯಲ್ಲೇ ನಮಾಜ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿಂದೂಪರ ಸಂಘಟನೆಗಳು ಎಚ್ಚೆತ್ತುಕೊಂಡು ಘಟನೆಯನ್ನು ತೀವ್ರವಾಗಿ ವಿರೋಧಿಸಿದೆ.
ವಿದ್ಯಾರ್ಥಿಗಳು ಶಾಲಾ ಕೊಠಡಿಯಲ್ಲಿ ನಮಾಜ್ ಮಾಡುತ್ತಿರುವ ವಿಚಾರ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ಗಮನಕ್ಕೆ ಮೊದಲು ಬಂದಿದ್ದು, ಅಧ್ಯಕ್ಷರು ಈ ವಿಚಾರವನ್ನು ಶಾಲೆಯ ಮುಖ್ಯ ಶಿಕ್ಷಕಿಯ ಗಮನಕ್ಕೆ ತಂದಿದ್ದರೆನ್ನಲಾಗಿದೆ. ಆದರೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದ ಮುಖ್ಯ ಶಿಕ್ಷಕಿ ಮತ್ತೆ ಈ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ ಹಿನ್ನಲೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸ್ವತಃ ಶಾಲೆಗೆ ತೆರಳಿ ಮಕ್ಕಳು ನಮಾಜ್ ಮಾಡುತ್ತಿರುವ ದೃಶ್ಯಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ತಕ್ಷಣ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ ಘಟನೆಯ ಬಗ್ಗೆ ಶಾಲೆಯಿಂದ ಮಾಹಿತಿ ಪಡೆದುಕೊಂಡಿದೆ. ಫೆ.11ರಂದು ಈ ಸಂಬಂಧ ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ತುರ್ತು ಸಭೆಯನ್ನು ನಡೆಸಿ ಘಟನೆಯ ಕುರಿತು ಗಂಭೀರ ಚರ್ಚೆಯನ್ನು ನಡೆಸಿದೆ.
ಸಭೆಯಲ್ಲಿ ಭಾಗವಹಿಸಿದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಘಟನೆಯ ಬಗ್ಗೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು ವಿಷಾದ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇಂಥ ಘಟನೆ ಮರು ಕಳಿಸದಂತೆ ಎಚ್ಚರ ವಹಿಸಲಾಗುವುದು. ಶಾಲೆಯಲ್ಲಿ ಶೈಕ್ಷಣಿಕ ವಿಚಾರ ಹೊರತುಪಡಿಸಿ, ಬೇರೆ ಯಾವುದೇ ಧಾರ್ಮಿಕ ವಿಚಾರಗಳನ್ನು ತರದಂತೆ ನಿರ್ಣಯವನ್ನೂ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಮಸೀದಿಗಾಗಿ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗುವುದನ್ನೂ ನಿಲ್ಲಿಸಲು ತೀರ್ಮಾನಿಸಲಾಗಿದ್ದು, ಶಾಲೆಯಲ್ಲಿ ಪಠ್ಯದ ವಿನಃ ಇತರ ವಿಷಯಗಳನ್ನು ತರುವುದಿಲ್ಲ ಎಂದು ಸಮಿತಿ ನಿರ್ಧರಿಸಿದೆ ಎಂದು ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಬಿನಾ ಮಾಹಿತಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಅಂಕತ್ತಡ್ಕ ಸರಕಾರಿ ಶಾಲೆ ಇದೀಗ ಈ ವಿವಾದವನ್ನು ಸೌಹಾರ್ದಯುತವಾಗಿ ಮುಗಿಸಿದ್ದಾರೆ.