ಸಮಗ್ರ ನ್ಯೂಸ್ ಡೆಸ್ಕ್: ಬಿಕಿನಿ ಅಥವಾ ಹಿಜಾಬ್ ಧರಿಸುವುದು ಮಹಿಳೆಯರ ಹಕ್ಕು ಎಂಬ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಹಿಳಾ ಸಮುದಾಯದ ಕ್ಷಮೆ ಕೋರಬೇಕು ಎಂದು ಹೊನ್ನಾಳಿ ಶಾಸಕ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕೋರಿದರು.
ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರು ಧರಿಸುವ ಬಟ್ಟೆಯ ಕುರಿತು ಹೇಳಿಕೆ ನೀಡುವ ಭರದಲ್ಲಿ ಪ್ರಿಯಾಂಕಾ ಅವರು ಬಿಕಿನಿ ಧರಿಸುವುದೂ ಹಕ್ಕು ಎಂಬ ಹೇಳಿಕೆ ನೀಡಿರುವುದು ಸಮಂಜಸವಲ್ಲ ಎಂದರು.
ವಿದ್ಯಾರ್ಥಿನಿಯರು ಮೈತುಂಬ ಬಟ್ಟೆ ಹಾಕಿಕೊಳ್ಳುತ್ತಾರೆ. ಭಾರತೀಯ ಸಂಸ್ಕೃತಿಯನ್ನು ಅನುಸರಿಸುವ ಮಹಿಳೆಯರು ಬಿಕಿನಿ ಧರಿಸಲಿ ಎಂದಿರುವುದು ಅತ್ಯಂತ ಕೀಳುಮಟ್ಟದ ಹೇಳಿಕೆ. ವಿದ್ಯಾರ್ಥಿನಿಯರು ಮೈತುಂಬ ಬಟ್ಟೆ ಹಾಕಿಕೊಳ್ಳಬೇಕು. ಯಾಕೆಂದರೆ ಮಹಿಳೆಯರು ಧರಿಸುವ ಉಡುಪುಗಳನ್ನು ನೋಡಿ ಪುರುಷರು ಉದ್ರೇಕಗೊಳ್ಳುತ್ತಾರೆ. ಅದರಿಂದ ಅತ್ಯಾಚಾರ ಪ್ರಕರಣಗಳೂ ಹೆಚ್ಚಲು ಕಾರಣವಾಗಿದೆ. ಇಂಥ ಹೇಳಿಕೆ ನೀಡಿದ್ದು ಒಳ್ಳೆಯದಲ್ಲ. ಬಿಕಿನಿ ಅನ್ನೋ ಕೀಳು ಮಟ್ಟದ ಶಬ್ದ ಬಳಸಿರುವ ಪ್ರಿಯಾಂಕಾ ಆ ಹೇಳಿಕೆ ಹಿಂದೆ ಪಡೆಯಬೇಕು, ಇಂತಹ ಪ್ರಚೋದನಾತ್ಮಕ ಹೇಳಿಕೆ ಸರಿಯಲ್ಲ ಎಂದು ಅವರು ಆಗ್ರಹಿಸಿದರು.
‘ನಮ್ಮ ದೇಶದಲ್ಲಿ ಮಹಿಳೆಯರ ಬಗ್ಗೆ ವಿಶೇಷ ಗೌರವ ಇದೆ. ಅವರಿಗೆ ತಾಯಿ ಸ್ಥಾನ ಇದೆ. ಪ್ರಿಯಾಂಕಾ ಅವರಿಗೆ ನಮ್ಮ ದೇಶದ ಧರ್ಮ, ಸಂಸ್ಕೃತಿ, ಪರಂಪರೆ ಅರ್ಥವಾಗಿಲ್ಲ. ಹೇಳಿಕೇಳಿ ಅವರ ತಾಯಿಯದ್ದು ಇಟಲಿ ಸಂಸ್ಕೃತಿ. ಅವರು ಮದುವೆ ಆಗಿದ್ದು ವೈಯಕ್ತಿಕ. ಈ ರೀತಿ ಹೇಳುತ್ತ ಹೋದರೆ ಸಾಕಷ್ಟು ಅರ್ಥ ಬರುತ್ತದೆ. ಹಾಗಾಗಿ ಅದು ಒಳ್ಳೆಯದಲ್ಲ ಎಂದು ಅವರು ಅಭಿಪ್ರಾಯಪಟ್ಟರು.
‘ರಾಜ್ಯದ ಕಾನೂನು ಸುವ್ಯವಸ್ಥೆ ಹಾಳುಗೆಡವಿ, ಸರ್ಕಾರದ ವರ್ಚಸ್ಸು ಕಡಿಮೆ ಮಾಡುವ ಉದ್ದೇಶದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆ, ದೇಶವಿರೋಧಿ ಚಟುವಟಿಕೆ ನಡೆಸುವವರು ಕುಂದಾಪುರದ ಒಂದು ಕಾಲೇಜಿನಲ್ಲಿ ನಡೆದಿದ್ದ ಹಿಜಾಬ್ ಘಟನೆಯನ್ನು ರಾಜ್ಯವ್ಯಾಪಿ ಹಬ್ಬಿಸುತ್ತಿವೆ’ ಎಂದು ಅವರು ದೂರಿದರು.
‘ನಮ್ಮ ಮಕ್ಕಳ ನಡುವೆ ವಿಷಬೀಜ ಬಿತ್ತುವ ಕಾಂಗ್ರೆಸ್ ನವರು, ಬಿಜೆಪಿಯವರು ಕೇಸರೀಕರಣ ಮಾಡುತ್ತಿದ್ದಾರೆ ಎಂದು ದೂರುತ್ತಾರೆ. ನಾವು ರಾಜಕಾರಣದಲ್ಲಿ ಕೇಸರೀಕರಣ ಮಾಡುತ್ತೇವೆ ನಿಜ. ಶಿಕ್ಷಣದಲ್ಲಿ ಮಾಡುವುದಿಲ್ಲ’ ಎಂದು ರೇಣುಕಾಚಾರ್ಯ ನುಡಿದರು.
‘ಹಿಂದು, ಮುಸ್ಲಿಂ, ಕ್ರೈಸ್ತರೆಲ್ಲರೂ ಭಾರತ ಮಾತೆಯ ಮಕ್ಕಳು. ಸಮಾನತೆ ಬೇಕು. ಹಾಗಾಗಿ, ಶಾಲೆ- ಕಾಲೇಜುಗಳಲ್ಲಿ ಸಮವಸ್ತ್ರ ಧರಿಸುವಂತೆ ಆದೇಶ ಹೊರಡಿಸಲಾಗಿದೆ. ಹೈಕೋರ್ಟ್ ನೀಡುವ ತೀರ್ಪನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಅವರು ಮನವಿ ಮಾಡಿದರು.
‘ಅತ್ಯಾಚಾರ ಪ್ರಕರಣಗಳು ಹೆಚ್ಚಲು ಮಹಿಳೆಯರ ಉಡುಪೇ ಕಾರಣ ಎಂಬ ಹೇಳಿಕೆ ನೀಡಿರುವುದು ದುರುದ್ದೇಶದಿಂದ ಅಲ್ಲ. ಈ ಹೇಳಿಕೆಯಿಂದ ಮಹಿಳೆಯರಿಗೆ ನೋವಾದಲ್ಲಿ ಕ್ಷಮೆ ಕೋರುವೆ’ ಎಂದು ಅವರು ಸ್ಪಷ್ಟಪಡಿಸಿದರು.