ಸಮಗ್ರ ನ್ಯೂಸ್ ಡೆಸ್ಕ್: ಸಮವಸ್ತ್ರಕ್ಕಾಗಿ ಪುರುಷ ಟೈಲರ್‌ಗಳು ಮಹಿಳಾ ಪೊಲೀಸ್ ಸಿಬ್ಬಂದಿಯ ಅಳತೆ ತೆಗೆದುಕೊಳ್ಳುತ್ತಿರುವ ಚಿತ್ರಗಳು ಮತ್ತು ವಿಡಿಯೊಗಳು ವೈರಲ್ ಆಗಿವೆ.
ಆಂದ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಅಳತೆ ತೆಗೆದುಕೊಳ್ಳಲು ಪುರುಷ ಟೈಲರ್‌ಗಳನ್ನು ನಿಯೋಜಿಸಿದ್ದನ್ನು ಗಮನಿಸಿದ ಮಹಿಳಾ ಅಧಿಕಾರಿಗಳು ಇದಕ್ಕೆ ಆಕ್ಷೇಪದ ಜೊತೆ ಆತಂಕ ವ್ಯಕ್ತಪಡಿಸಿದ್ದಾರೆ.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ, ಪೊಲೀಸ್ ಅಧೀಕ್ಷಕ (ಎಸ್‌ಪಿ) ವಿಜಯ ರಾವ್ ಅವರು ಮಧ್ಯಪ್ರವೇಶಿಸಿ ಪುರುಷ ಟೈಲರ್‌ಗಳ ತಂಡವನ್ನು ಬದಲಾಯಿಸಿದರು. ಜೊತೆಗೆ ಈ ಘಟನೆಯನ್ನು ಸಂಪೂರ್ಣವಾಗಿ ಬಗೆಹರಿಸಲು ಹೆಚ್ಚುವರಿ ಎಸ್‌ಪಿ ವೆಂಕಟರತ್ನಂ ಅವರನ್ನ ನಿಯೋಜಿಸಲಾಯಿತು.
ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಎಸ್ಪಿ ವಿಜಯರಾವ್ ರವರು ಪುರುಷ ಟೈಲರ್ ಅನ್ನು ನಿಯೋಜಿಸಿದ ಹೆಡ್ ಕಾನ್‌ಸ್ಟೆಬಲ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಮಹಿಳಾ ಸಿಬ್ಬಂದಿ ಹಾಗೂ ಅಧಿಕಾರಿಗಳ ಪ್ರೈವೆಸಿ ಸುರಕ್ಷಿತವಾಗಿದೆ ಎಂದು ಭರವಸೆ ನೀಡಿದರು. ಮೆಷರ್ಮೆಂಟ್ಸ್ ತೆಗೆದುಕೊಳ್ಳುತ್ತಿರುವ ವಿಡಿಯೋ ಹಾಗೂ ಚಿತ್ರಗಳು ವೈರಲ್ ಆಗುತ್ತಿದ್ದಂತೆಯೇ ಅನಧಿಕೃತವಾಗಿ ಚಿತ್ರೀಕರಿಸಲಾಗಿದೆ. ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಯ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಎಸ್ಪಿ ಹೇಳಿದರು.
ಆಂಧ್ರಪ್ರದೇಶದ ಮಹಿಳಾ ಆಯೋಗದ ಮುಖ್ಯಸ್ಥೆ ವಿ ಪದ್ಮಾ ಅವರು ಕೂಡ ನೆಲ್ಲೂರು ಎಸ್ಪಿ ಜತೆ ಮಾತನಾಡಿ ವಿವರಣೆ ಕೇಳಿದ್ದಾರೆ. ಇತ್ತ ಮಹಿಳಾ ಪೊಲೀಸ್ ಸಿಬ್ಬಂದಿಗೆ ಅಗೌರವ ತೋರಿದ್ದಾರೆಂದು ತೆಲುಗು ದೇಶಂ ಪಕ್ಷ (ಟಿಡಿಪಿ) ಖಂಡಿಸಿದೆ. ಪುರುಷ ಟೈಲರ್‌ಗಳನ್ನ ನೇಮಿಸಿದ್ದಕ್ಕೆ ಟಿಡಿಪಿ ಮಹಿಳಾ ರಾಜ್ಯಾಧ್ಯಕ್ಷೆ ವಂಗಲಪುಡಿ ಅನಿತಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಾಮಾನ್ಯ ಮಹಿಳೆಯರಿಗಷ್ಟೇ ಅಲ್ಲ, ಮಹಿಳಾ ಪೊಲೀಸರಿಗೂ ಈಗ ಭದ್ರತೆ ಇಲ್ಲ, ಎಂದು ಟಿಡಿಪಿ ನಾಯಕಿ ವಾಗ್ದಾಳಿ ನಡೆಸಿದರು. ಘಟನೆಯ ಕುರಿತು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿವರಣೆ ನೀಡಲಿ ಎಂದು ಟಿಡಿಪಿ ಒತ್ತಾಯಿಸಿದೆ.