ಸಮಗ್ರ ನ್ಯೂಸ್ ಡೆಸ್ಕ್: ಹಿಜಾಬ್ ಪರ-ವಿರೋಧ ಜಟಾಪಟಿ ರಾಜ್ಯದ ಹಲವು ಜಿಲ್ಲೆಗಳಿಗೆ ವ್ಯಾಪಿಸಿದೆ. ಸರ್ಕಾರದ ನಿರ್ದೇಶನದ ಹೊರತಾಗಿಯೂ ಹಲವು ವಿದ್ಯಾರ್ಥಿನಿಯರು ಇಂದು(ಮಂಗಳವಾರ) ಕೂಡ ಹಿಜಾಬ್ ಧರಿಸಿ ಕಾಲೇಜಿಗೆ ಬಂದರೆ, ಇದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸಿ ಹಲವರು ಕಾಲೇಜು ಪ್ರವೇಶಿಸಿದ್ದಾರೆ. ಇದರಿಂದ ಹಲವು ಕಾಲೇಜುಗಳ ಬಳಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.
ಉಡುಪಿ, ಮಂಡ್ಯ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಕಲಬುರಗಿ, ರಾಯಚೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿದೆ. ಹಿಜಾಬ್ ಧರಿಸಿ ಮುಸ್ಲಿಂ ಯುವತಿಯರು ಬಂದರೆ, ಅತ್ತ ಕೇಸರಿ ಶಾಲು, ನೀಲಿ ಶಾಲು ಧರಿಸಿ ಹಿಂದು ವಿದ್ಯಾರ್ಥಿಗಳು ಬರುತ್ತಿದ್ದಾರೆ.
ಅಂಬೇಡ್ಕರ್ ಎಲ್ಲರೂ ಒಂದೇ ಎಂದಿದ್ದರು, ನಾವೆಲ್ಲಾ ಒಂದೇ. ಕಾಲೇಜಲ್ಲಿ ಹಿಜಾಬ್ ತೆಗೆಯೋವರೆಗೂ ಕೇಸರಿ ತೆಗೆಯಲ್ಲ. ಕಾಲೇಜಲ್ಲಿ ಎಲ್ಲರೂ ಒಂದೇ, ಇಲ್ಲಿ ಸಮಾನತೆ ಸಾರಬೇಕು ಎಂದು ಚಿಕ್ಕಮಗಳೂರಿನ ಐಡಿಎಸ್ಜಿ ಕಾಲೇಜು ಬಳಿ ವಿದ್ಯಾರ್ಥಿಗಳು ಘೋಷಣೆ ಕೂಗಿದ್ದಾರೆ.
ದಾವಣಗೆರೆಯ ಬಿ.ಎಸ್. ಚನ್ನಬಸಪ್ಪ ಪದವಿ ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳನ್ನು ಸಿಬ್ಬಂದಿ ಕೆಲ ಕಾಳ ತಡೆದರು. ಕೋರ್ಟ್ ಆದೇಶ ಬರುವವರೆಗೆ ಯಥಾಸ್ಥಿತಿ ಕಾಪಾಡುವಂತೆ ಕಾಲೇಜಿನ ಪ್ರಾಚಾರ್ಯ ಎಂ.ಸಿ. ಗುರು ಮನವಿ ಮಾಡಿದರು. ಕೇಸರಿ ಶಾಲು ಧರಿಸಿಯೇ ಕಾಲೇಜು ಪ್ರವೇಶಿಸಿದ ವಿದ್ಯಾರ್ಥಿಗಳು ತರಗತಿಯಲ್ಲಿ ಶಾಲು ತೆಗೆದು ಕುಳಿತರು.
ಹಿಜಾಬ್ ವಿರೋಧಿಸಿ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣ ಸರ್ಕಾರಿ ಡಿಗ್ರಿ ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಶ್ರೀರಾಮ ಸೇನೆ ಬೆಂಬಲಿತ ವಿದ್ಯಾರ್ಥಿಗಳು ಆಗಮಿಸಿದರು. ಈ ವೇಳೆ ಬಡಿಗೆ ಹಿಡಿದು ನಿಂತು ವಿದ್ಯಾರ್ಥಿಗಳನ್ನು ತಡೆದ ಉಪನ್ಯಾಸಕ ಕರಿಗೂಳೇಸ್ವರ್ ಮತ್ತು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಹಿಜಾಬ್ ಧರಿಸಿದವರನ್ನು ಕಾಲೇಜಿನಲ್ಲಿ ಬಿಟ್ಟಿದ್ದೀರಿ. ನಮಗೂ ಕಾಲೇಜಿನೊಳಗೆ ಪರವಾನಗಿ ನೀಡಿ ಅಂತ ವಿದ್ಯಾರ್ಥಿಗಳು ಆಗ್ರಹಿಸಿದರು.
ಹಾಸನದಲ್ಲೂ ಹಿಜಾಬ್-ಕೇಸರಿ ಶಾಲು ವಿವಾದ ತಾರಕಕ್ಕೇರಿದೆ. ಹಿಜಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರು ಕಾಲೇಜಿನ ಆವರಣದಲ್ಲಿ ತಡೆದರೂ ಕ್ಯಾರೆ ಎನ್ನದೆ ತರಗತಿಗೆ ತೆರಳಿದರು. ವಿದ್ಯಾರ್ಥಿಗಳು ತಲೆ ಮೇಲೆ ಟೋಪಿ ಧರಿಸಿ ಬಂದಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಕಾಲೇಜಿಗೆ ಬಂದ ಬಜರಂಗಿ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಹಿಂದು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸಿದರು. ಈ ವೇಳ ಮುಸ್ಲಿಂ ವಿದ್ಯಾರ್ಥಿಗಳು ತರಗತಿಯಿಂದ ಹೊರನಡೆದರು. ನಿಮ್ಮ ಕಾಲಿಗೆ ಬೀಳುತ್ತೇನೆ ಹಿಜಬ್ ತೆಗೆಯಿರಿ… ಎಂದು ಮನವಿ ಉಪನ್ಯಾಸಕರೊಬ್ಬರು ಮನವಿ ಮಾಡ್ತಿದ್ದ ದೃಶ್ಯ ಕಂಡು ಬಂತು.
ಮಂಡ್ಯದಲ್ಲಿ ಬುರ್ಕಾ ಧರಿಸಿಕೊಂಡು ವಿದ್ಯಾರ್ಥಿನಿ ಕಾಲೇಜು ಒಳಗೆ ಪ್ರವೇಶ ಮಾಡುತ್ತಿದ್ದಂತೆ ಜೈ ಶ್ರೀರಾಮ್ ಎಂದು ಹಿಂದು ವಿದ್ಯಾರ್ಥಿಗಳು ಘೋಷಣೆ ಕೂಗಿದ್ದಾರೆ. ಇದಕ್ಕೆ ಪ್ರತಿಯಾಗಿ ಅಲ್ಲಾವು ಅಕ್ಬರ್ ಎಂದು ವಿದ್ಯಾರ್ಥಿನಿ ಘೋಷಣೆ ಕೂಗಿದ್ದಾಳೆ.
ಶಿವಮೊಗ್ಗದ ಬಿಎಚ್ ರಸ್ತೆಯಲ್ಲಿರುವ ಸರ್ಕಾರಿ ಪಿಯು ಕಾಲೇಜು ಕಲಾ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದಿದೆ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳ ನಡುವೆ ಹಿಜಾಬ್ ಪರ ಹಾಗೂ ವಿರೋಧ ವಾಕ್ಸಮರ ನಡೆದಿದೆ. ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.