ಸಮಗ್ರ ನ್ಯೂಸ್ ಡೆಸ್ಕ್: ಕರಾವಳಿಯಲ್ಲಿ ಕೆಲವು ದಿನಗಳಿಂದ ಬೆಳಗಿನ ಸಮಯ ಉತ್ತಮ ಚಳಿ ಕಾಣಿಸಿಕೊಳ್ಳುತ್ತಿದೆ. ಬೆಳಗ್ಗೆ ಮಂಜು ಮುಸುಕಿದ ವಾತಾವರಣವೂ ಕಂಡುಬರುತ್ತಿದೆ.
ರವಿವಾರ ಸಂಜೆಯ ವೇಳೆಗೆ ಕೊಡಗು, ಕುಕ್ಕೆ ಸುಬ್ರಹ್ಮಣ್ಯ ಭಾಗದಲ್ಲಿ ಮೋಡ ಕವಿದ ವಾತಾವರಣವೂ ಕಂಡು ಬಂದಿದ್ದು, ಸುಳ್ಯ ತಾಲೂಕಿನ ಬಾಳಿಲ ಮತ್ತಿತರ ಕೆಲವೆಡೆ ತುಂತುರು ಮಳೆಯಾಗಿದೆ.
ಉಡುಪಿ ಭಾಗದಲ್ಲಿ ರವಿವಾರ ಬೆಳಗ್ಗೆ ಮೋಡ ಕಂಡುಬಂದಿತ್ತು. ಮೋಡದ ವಾತಾವರಣ ಸೋಮವಾರ ಕೂಡ ಇರುವ ಸಾಧ್ಯತೆಗಳಿದ್ದು, ಒಂದೆರಡು ಕಡೆ ಚದುರಿದಂತೆ ಮಳೆಯಾಗುವ ಸಂಭಾವ್ಯತೆ ಇದೆ.
ರವಿವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಗರಿಷ್ಠ ಉಷ್ಣಾಂಶ 29.5 ಡಿಗ್ರಿ ಸೆ. ಇದ್ದು, ಇದು ವಾಡಿಕೆಗಿಂತ 3.9 ಡಿಗ್ರಿ ಸೆ. ಇಳಿಕೆಯಾಗಿದೆ.
ಹಾಗೆಯೇ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆ. ಇತ್ತು. ಪಣಂಬೂರಿನಲ್ಲಿ ಗರಿಷ್ಠ ಉಷ್ಣಾಂಶ 32.2 ಡಿಗ್ರಿ ಸೆ. ಮತ್ತು ಕನಿಷ್ಠ ಉಷ್ಣಾಂಶ 20.1 ಡಿಗ್ರಿ ಸೆ. ಇತ್ತು.
ಎರಡು ದಿನಗಳ ಹಿಂದೆ ಅಂದರೆ ಶುಕ್ರವಾರ ಕನಿಷ್ಠ 21 ಡಿಗ್ರಿ ಹಾಗೂ ಗರಿಷ್ಠ 31ಡಿಗ್ರಿ ಉಷ್ಣಾಂಶ ಇತ್ತು. ಈಗ 2 ದಿನಗಳಲ್ಲಿ ಕನಿಷ್ಠ ಮತ್ತು ಗರಿಷ್ಠ ಉಷ್ಣಾಂಶಗಳಲ್ಲಿ ತಲಾ 1 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ.