ಸಮಗ್ರ ನ್ಯೂಸ್ ಡೆಸ್ಕ್: ಅಂಗಳದಲ್ಲಿ ಒಣಗಿಸಿದ್ದ 62 ಮೂಟೆಗಳಷ್ಟು ಸಿಪ್ಪೆಗೋಟು ಅಡಕೆಯನ್ನು ರಾತ್ರೋರಾತ್ರಿ ಕಳ್ಳತನ ಮಾಡಿದ ಪ್ರಕರಣ ತಾಲೂಕಿನ ತಾಳಗುಪ್ಪ ಸಮೀಪದ ತಲವಾಟ ಗ್ರಾಮದಲ್ಲಿ ನಡೆದಿದೆ. ಸುಮಾರು 21 ಕ್ವಿಂಟಾಲ್‌ಗಳಷ್ಟು ಅಡಕೆ ಕಳ್ಳತನ ಆಗಿರಬಹುದು ಎಂದು ಅಂದಾಜಿಲಾಗಿದ್ದು, ಈ ಅಡಕೆಯ ಮೌಲ್ಯ 4.20 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.
ತಲವಾಟ ಗ್ರಾಮದ ಮೋಹನ ನಾಗಾನಾಯ್ಕ ಹಾಗೂ ನೆರೆಮನೆಯಲ್ಲಿರುವ ಮಾವ ಕನ್ನಪ್ಪ ಶಂಬುಲಿಂಗ ನಾಯ್ಕ ಅವರು ತಮ್ಮ ತಮ್ಮ ತೋಟದ ಗೋಟಡಿಕೆಯನ್ನು ಪಕ್ಕದ ಮನೆಯವರಾದ ಸತ್ಯನಾರಾಯಣ ನಾಗಾನಾಯ್ಕ ಅವರ ಖಾಲಿ ಜಾಗದಲ್ಲಿ ಒಣಗಿಸಿದ್ದರು. ಅಡಕೆ ಸುಲಿಯುವ ಕೆಲಸ ಮುಗಿಸಿ ಮರುದಿನ ಬೆಳಗ್ಗೆ ನೋಡಿದಾಗ ಮೋಹನ್ ಅವರಿಗೆ ಸೇರಿದ ಸುಮಾರು 45 ಚೀಲ ಹಾಗೂ ಕನ್ನಪ್ಪ ಅವರಿಗೆ ಸೇರಿದ ಸುಮಾರು 17 ಚೀಲ ಸಿಪ್ಪೆಗೋಟು ಕಳುವಾಗಿರುವುದು ಬೆಳಕಿಗೆ ಬಂದಿದೆ. ಪ್ರಕರಣ ಬುಧವಾರ ರಾತ್ರಿ ನಡೆದಿದೆ. ಮೋಹನ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.