ಸಮಗ್ರ ನ್ಯೂಸ್ ಡೆಸ್ಕ್: ಹಿಜಾಬ್ ಧರಿಸಿ ಬಂಧ ಕಾರಣಕ್ಕಾಗಿ ಕುಂದಾಪುರ ಸರಕಾರಿ ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಗುರುವಾರ ಕಾಲೇಜಿನ ಗೇಟಿನಲ್ಲಿಯೇ ತಡೆದು ಪ್ರವೇಶ ನಿರಾಕರಿಸಿದ ಬಗ್ಗೆ ವರದಿಯಾಗಿದೆ.
ಹಿಜಾಬ್‌ಗೆ ಪ್ರತಿಯಾಗಿ ಕೆಲವು ವಿದ್ಯಾರ್ಥಿಗಳು ಬುಧವಾರ ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಕುಂದಾಪುರ ಸರಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ವಿವಾದ ಉಂಟಾಗಿತ್ತು.
ಈ ಹಿನ್ನೆಲೆಯಲ್ಲಿ ಶಾಸಕರ ನೇತೃತ್ವದಲ್ಲಿ ಕರೆದ ಸಭೆಯಲ್ಲಿ ವಸ್ತ್ರ ಸಂಹಿತೆ ಪಾಲಿಸುವಂತೆ ಮತ್ತು ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರ್ಬಂಧ ವಿಧಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು.
ಅದರಂತೆ ಇಂದು ಬೆಳಗ್ಗೆ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ 28 ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಗೇಟಿನಲ್ಲಿಯೇ ತಡೆದರು. ‘ನಮಗೆ ವಿದ್ಯೆಯೂ ಬೇಕು, ಹಿಜಾಬ್ ಕೂಡ ಬೇಕು. ನಮಗೆ ಕಾಲೇಜಿಗೆ ಬರಲು ಅನುಮತಿ ನೀಡಿ. ಯಾವುದೇ ಕಾರಣಕ್ಕೂ ಗೇಟು ಹಾಕಬೇಡಿ. ನಾವು ಇದೇ ಕಾಲೇಜಿನ ವಿದ್ಯಾರ್ಥಿನಿಯರು. ನಮ್ಮನ್ನು ಮನುಷ್ಯರಂತೆ ನೋಡಿ ಅವಕಾಶ ಕಲ್ಪಿಸಿ ಎಂದು ವಿದ್ಯಾರ್ಥಿನಿಯರು ಪ್ರಾಂಶುಪಾಲರಲ್ಲಿ ಪರಿಪರಿಯಾಗಿ ಬೇಡಿಕೊಂಡರು.
ವಸ್ತ್ರ ಸಂಹಿತೆ ಪಾಲಿಸುವ ಕುರಿತ ಸರಕಾರದ ಆದೇಶದಲ್ಲಿ ಎಲ್ಲೂ ನಮ್ಮ ಕಾಲೇಜಿನ ಹೆಸರು ಉಲ್ಲೇಖಿಸಿಲ್ಲ. ನಾವು ಮೊದಲಿನಿಂದಲೂ ಹಿಜಾಬ್ ಹಾಕಿ ಕೊಂಡೆ ಬರುತ್ತಿದ್ದೇವು. ಈಗ ಯಾಕೆ ವಿವಾದ ಸೃಷ್ಠಿಸುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ಪ್ರಶ್ನಿಸಿದರು. ಆದರೆ ಪ್ರಾಂಶುಪಾಲರು ಮಕ್ಕಳಿಗೆ ಕಾಲೇಜಿನ ಗೇಟಿ ನೊಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಪ್ರಾಂಶುಪಾಲರೊಂದಿಗೆ ವಾದ ಮಾಡುವ ವೇಳೆ ಮಕ್ಕಳು ಬಾವುಕರಾಗಿ ಕಣ್ಣೀರು ಹಾಕಿದರು.
ಆದರೆ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಕಾಲೇಜಿನ ಆವರಣದೊಳಗೆ ಬರಲು ಪ್ರಾಂಶುಪಾಲರು ಅನುಮತಿ ನೀಡದೆ ಗೇಟು ಹಾಕಿದರು. ಎಲ್ಲ ವಿದ್ಯಾರ್ಥಿಗಳು ಗೇಟಿನ ಹೊರಗೆ ನಿಂತು ಕಾಯುತ್ತಿರುವುದು ಕಂಡುಬಂದಿದೆ. ಈ ವಿವಾದದ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.