ಸಮಗ್ರ ನ್ಯೂಸ್ ಡೆಸ್ಕ್: 2022-23ನೇ ಬಜೆಟ್ ಕುರಿತಾಗಿ ವಿಪಕ್ಷ ನಾಯಕರು ವ್ಯಾಪಕ ಟೀಕೆ ಮಾಡಿದ್ದು, ಇದು ಶೂನ್ಯ ಬಜೆಟ್ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಟ್ವೀಟ್‍ನಲ್ಲಿ ಏನಿದೆ?: ಮೋದಿ ಸರ್ಕಾರದ ಶೂನ್ಯ ಬಜೆಟ್ ಇದಾಗಿದೆ. ಸಂಬಳ ಪಡೆಯುವವರಿಗೂ, ಮಧ್ಯಮ ವರ್ಗದವರಿಗೆ, ಬಡವರು ಮತ್ತು ವಂಚಿತರು, ಯುವ ಜನ, ರೈತರು ಮತ್ತು MSMEಗಳಿಗೆ ಯಾವುದಕ್ಕೂ ಏನು ಸಿಕ್ಕಿಲ್ಲ ಎಂದು ಟ್ವೀಟ್ ಮಾಡಿ ಆಡಳಿತ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯಿಸಿದ್ದು, ನಾವು ಭಯಾನಕ ಹಣದುಬ್ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಬಜೆಟ್‍ನಲ್ಲಿ ಮಧ್ಯಮ ವರ್ಗದವರಿಗೆ ಯಾವುದೇ ತೆರಿಗೆ ವಿನಾಯಿತಿ ಇಲ್ಲ. ಈ ಬಜೆಟ್‍ನಲ್ಲಿ ಅಚ್ಛೇ ದಿನ್ ಮರೀಚಿಕೆಯಾಗಿದೆ. ಅಚ್ಛೇ ದಿನ್ ಬರಲು ನಾವು ಇನ್ನೂ 25 ವರ್ಷಗಳವರೆಗೆ ಕಾಯಬೇಕಾಗಿದೆ ಎಂದು ಟೀಕಿಸಿದ್ದಾರೆ. ಅತ್ಯಂತ ನಿರಾಶಾದಾಯಕ ಬಜೆಟ್ ಇದಾಗಿದೆ. ಬಜೆಟ್‍ನಲ್ಲಿ ಏನೂ ಇಲ್ಲ. ಮನ್ರೇಗಾ, ರಕ್ಷಣೆ, ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಪೂರಕವಾದ ಯಾವುದೇ ಅಂಶಗಳ ಉಲ್ಲೇಖವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿರುದ್ಯೋಗ, ಹಣದುಬ್ಬರದಿಂದ ನಲುಗಿ ಹೋಗುತ್ತಿರುವ ಸಾಮಾನ್ಯ ಜನರಿಗೆ ಬಜೆಟ್ ಶೂನ್ಯವನ್ನು ನೀಡಿದೆ. ಇದು ಪೆಗಾಸಸ್ ಸ್ಪಿನ್ ಬಜೆಟ್ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಪ್ರಧಾನಿ ಗತಿಶಕ್ತಿ ಯೋಜನೆ, ಎಲ್ಲರನ್ನು ಒಳಗೊಳ್ಳುವ ಅಭಿವೃದ್ಧಿ, ಅಭಿವೃದ್ಧಿ ಆಧಾರಿತ ಹೂಡಿಕೆ, ಉದ್ಯಮಕ್ಕೆ ಆರ್ಥಿಕ ಉತ್ತೇಜನ ಹೀಗೆ ನಾಲ್ಕು ಸೂತ್ರಗಳನ್ನು ಬಜೆಟ್ ಒಳಗೊಂಡಿತ್ತು. 400 ಹೊಸ ತಲೆಮಾರಿನ ವಂಧೆ ಭಾರತ್ ರೈಲು, 2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೆರಿಸುವ ಯೋಜನೆ, ಗ್ರಾಮೀಣ ಮಕ್ಕಳಿಗೆ ವನ್ ಕ್ಲಾಸ್ ವನ್ ಟಿವಿ, ಕೆನ್ ಬೆಟ್ಟಾ ನದಿ ಜೋಡಣೆ ಯೋಜನೆ, ಪಿಎಂ ಆವಾಸ್ ಯೋಜನೆಯಡಿ 80 ಲಕ್ಷ ಮನೆ ನಿರ್ಮಾಣ, ಜಿಎಸ್‍ಟಿ ಸಂಗ್ರಹ, 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಹೀಗೆ ಹಲವು ಯೋಜನೆಗಳನ್ನು ಕೇಂದ್ರ ಬಜೆಟ್ ಒಳಗೊಂಡಿತ್ತು.