ಸಮಗ್ರ ನ್ಯೂಸ್ ಡೆಸ್ಕ್ : ಲವ್ ಜಿಹಾದ್ ಗೆ ಒಳಗಾಗಿ ಉಗ್ರ ಮಹಿಳೆಯಾಗಿ ಬದಲಾಗಿದ್ದ ಉಳ್ಳಾಲದ ಮಾಜಿ ಶಾಸಕ ಇದಿನಬ್ಬ ಮೊಮ್ಮಗನ ಪತ್ನಿ ಮರಿಯಂ ಅಲಿಯಾಸ್ ದೀಪ್ತಿ ಮಾರ್ಲಾ ಸೇರಿದಂತೆ ಎಂಟು ಆರೋಪಿಗಳ ವಿರುದ್ಧ ಐಸಿಸ್ ಜೊತೆ ಲಿಂಕ್ ಇರುವ ಕಾರಣಕ್ಕೆ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿದೆ.
ಆರೋಪಿಗಳಾದ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ, ಮೊಹಮ್ಮದ್ ವಕಾರ್ ಲಾನ್ ಯಾನೆ ವಿಲ್ಸನ್ ಕಾಶ್ಮೀರಿ, ಮಿಜಾ ಸಿದ್ದೀಕ್, ಶಿಫಾ ಹಾರೀಸ್ ಯಾನೆ ಆಯಿಷಾ, ಒಬೈದ್ ಹಮೀದ್ ಮಟ್ಟಾ, ಮಾದೇಶ್ ಶಂಕರ್ ಯಾನೆ ಅಬ್ದುಲ್ಲಾ, ಅಮ್ಮರ್ ಅಬ್ದುಲ್ಲಾ ರಹಿಮಾನ್ ಮತ್ತು ಮುಜಾಮಿಲ್ ಹಸನ್ ಭಟ್ ಎಂಬವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಕೇರಳ ಮೂಲದ ಮೊಹಮ್ಮದ್ ಅಮೀನ್ ಯಾನೆ ಅಬು ಯಾಹ್ಯಾ ಮತ್ತು ಆತನ ಸಹಚರರ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ 2021ರ ಮಾರ್ಚ್‌ನಲ್ಲಿ ಸಾಮಾಜಿಕ ಜಾಲತಾಣಗಳಾದ ಟೆಲಿಗ್ರಾಂ, ಹೂಪ್, ಇನ್‌ಸ್ಟ್ರಾಗ್ರಾಂಗಳನ್ನು ಬಳಸಿಕೊಂಡು ಐಸಿಸ್‌ಗೆ ಜನರನ್ನು ಸೇರಿಸಿಕೊಂಡಿರುವ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. ಇದೇ ಪ್ರಕರಣದಲ್ಲಿ ಎನ್‌ಐಎ 2021ರ ಸೆ.8ರಂದು ಮೂವರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು.
ಕಳೆದ ಶುಕ್ರವಾರ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಎಂಟು ಆರೋಪಿಗಳು ಐಸಿಸ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ. ಐಸಿಸ್ ಗೆ ಜನರನ್ನು ನೇಮಕ ಮಾಡುವುದು, ಭಯೋತ್ಪಾದಕ ಕೃತ್ಯಕ್ಕೆ ನಿಧಿ ಸಂಗ್ರಹಿಸುವುದರಲ್ಲಿ ತೊಡಗಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ.