ಸಮಗ್ರ ಕ್ರೈಂ ಡೆಸ್ಕ್: ಹಣ ಗಳಿಸುವ ಉದ್ದೇಶದಿಂದ ಯೂಟ್ಯೂಬ್ ಚಾನೆಲ್ ನಲ್ಲಿ ಯುವತಿಯ ಪೋಟೋ ದುರುಪಯೋಗ ಮಾಡಿದ್ದ ಆರೋಪದಲ್ಲಿ ದಂಪತಿಯನ್ನು ಬಂಟ್ವಾಳ ನಗರ ಠಾಣಾ ಎಸ್. ಐ. ಅವಿನಾಶ್ ನೇತ್ರತ್ವದ ತಂಡ ಶಿವಮೊಗ್ಗದಲ್ಲಿ ಬಂಧಿಸಿದ್ದಾರೆ.
ಬಂಟ್ವಾಳ ಮೂಲದ ಪ್ರತಿಷ್ಠಿತ ಕುಟುಂಬದ ಯುವತಿಯೋರ್ವಳ ಪೋಟೋ ಒಂದನ್ನು ಕನ್ನಡ ಲೈಟ್ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಬಳಕೆ ಮಾಡಿಕೊಂಡಿದ್ದರು ಎಂಬ ದೂರು ಬಂಟ್ವಾಳ ನಗರ ಪೋಲೀಸ್ ಠಾಣೆಯ ಲ್ಲಿ ದೂರು ದಾಖಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಎಸ್.ಐ.ಅವಿನಾಶ್ ನೇತ್ರತ್ವದ ತಂಡ ಕಾರ್ಯಚರಣೆ ನಡೆಸಿ ಶಿವಮೊಗ್ಗದಲ್ಲಿ ಆರೋಪಿಗಳಾದ ಹರೀಶ್ ಹಾಗೂ ಅನೂಷಾ ಎಂಬ ದಂಪತಿಗಳನ್ನು ಬಂಧಿಸಿದ್ದಾರೆ.
ಘಟನೆಯ ವಿವರ:
ಹರೀಶ್ ಮತ್ತು ಅನೂಷಾ ಎಂಬಿಬ್ಬರು ದಂಪತಿಗಳು ಬೆಂಗಳೂರಿನಲ್ಲಿ ಸಾಪ್ಟ್ ವೇರ್ ಇಂಜಿನಿಯರ್ ಆಗಿದ್ದು ಕೆಲಸ ನಿರ್ವಹಿಸುತ್ತಿದ್ದರು. ಆದರೆ ಹೆಚ್ಚಿನ ಹಣ ಗಳಿಸಬೇಕು ಎಂಬ ಉದ್ದೇಶದಿಂದ ಶಿವಮೊಗ್ಗದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದು, ಅಲ್ಲಿಂದಲೇ ಕನ್ನಡ ಲೈಟ್ ಎಂಬ ಯೂಟ್ಯೂಬ್ ಚಾನೆಲ್ ಒಂದನ್ನು ತಯಾರಿಸಿ ಅ ಮೂಲಕ ವಿಡಿಯೋ ಗಳನ್ನು ವೈಭವೀಕರಿಸಿ ಅಪ್ ಲೋಡ್ ಮಾಡಿಕೊಳ್ಳುತ್ತಿದ್ದರು.
ಸಮಾಜದಲ್ಲಿ ನಡೆಯುವ ಘಟನೆಗಳಿಗೆ ಸಂಬಂಧಿಸಿದಂತೆ ವಿಡಿಯೋ ಗಳನ್ನು ತಯಾರಿಸಿ ಇವರೇ ಅಪ್ ಲೋಡ್ ಮಾಡುತ್ತಿದ್ದರು.
ಇತ್ತೀಚಿಗೆ ಬೇರೆ ರಾಜ್ಯವೊಂದರಲ್ಲಿ ಜ್ಯೋತಿಷಿಯೋರ್ವನ ವಿಚಾರವೊಂದರ ಘಟನೆಗೆ ಸಂಬಂಧಿಸಿದಂತೆ ಬಂದಿರುವ ವರದಿಗೆ ಇವರೇ ವಿಡಿಯೋ ತಯಾರಿಸಿ ಬಳಿಕ ಬಂಟ್ವಾಳ ಮೂಲದ ಯುವತಿಯ ಪೋಟೋ ಒಂದನ್ನು ಅದರ ಜೊತೆ ದುರ್ಬಳಕೆ ಮಾಡಿಕೊಂಡು ಅತೀ ಹೆಚ್ಚು ಜನರ ಗಮನ ಸೆಳದು ಅ ಮೂಲಕ ಹಣ ಗಳಿಸುವುದಕ್ಕಾಗಿ ವಿಡಿಯೋ ಮಾಡಿ ಯೂಟ್ಯೂಬ್ ಗೆ ಅಪ್ ಲೋಡ್ ಮಾಡಿದ್ದಾರೆ.
ಅ ಘಟನೆಗೂ ಇಲ್ಲಿನ ಯುವತಿಗೂ ಯಾವುದೇ ಸಂಬಂಧವಿಲ್ಲದ ಕಾರಣ ಇವರ ಮೇಲೆ ಕಾನೂನು ಕ್ರಮಕ್ಕೆ ದೂರು ನೀಡಲಾಗಿತ್ತು.
ಈ ದೂರಿನ ಹಿನ್ನೆಲೆಯಲ್ಲಿ ಪ್ರಕರಣದ ಬೆನ್ನು ಹತ್ತಿದ ಬಂಟ್ವಾಳ ನಗರ ಪೋಲೀಸರು ಶಿವಮೊಗ್ಗದಲ್ಲಿ ಕಾರ್ಯಾಚರಿಸುತ್ತಿದ್ದ ಇವರಿಬ್ಬರನ್ನು ಬಂಧಿಸಿದ್ದಾರೆ.