ಸಮಗ್ರ ನ್ಯೂಸ್ ಡೆಸ್ಕ್: ಚಲನಚಿತ್ರ ಹಾಗೂ ಕಿರುತೆರೆ ನಿರ್ದೇಶಕ ಕಟ್ಟೆ ರಾಮಚಂದ್ರ(75) ಅವರು ಶುಕ್ರವಾರ ಕೋವಿಡ್ ಕಾರಣದಿಂದ ನಗರದ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಮೂರು ದಿನಗಳ ಹಿಂದೆ ಅವರ ಪತ್ನಿಯೂ ನಿಧನರಾಗಿದ್ದು, ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.
ಚಿತ್ರರಂಗದಲ್ಲಿ ಹಲವು ದಶಕಗಳಿಂದ ಸಕ್ರಿಯರಾಗಿದ್ದ ರಾಮಚಂದ್ರ ಅವರು, ವೈಶಾಖದ ದಿನಗಳು, ಮಹಾಲಕ್ಷ್ಮೀ ಚಿತ್ರಗಳನ್ನು ನಿರ್ಮಿಸಿದ್ದರು.
ಮನೆ ಮನೆ ಕಥೆ, ಅಲೆಗಳು ಮತ್ತು ಇತರ ಧಾರಾವಾಹಿಗಳಲ್ಲಿ ನಟಿಸಿದ್ದರು. ಅವರ ನಿರ್ದೇಶನದ ‘ಅರಿವು’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರಕಿತ್ತು. ‘ತನು ನಿನ್ನದು ಮನ ನಿನ್ನದು’ ಧಾರಾವಾಹಿ ನಿರ್ಮಾಣ, ನಿರ್ದೇಶನ ಮಾಡಿದ್ದ ರಾಮಚಂದ್ರ ಕನ್ನಡ ಸಿನಿಮಾರಂಗಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದರು.