Ad Widget .

ಮರಗಳ್ಳರ ರಕ್ಷಣೆಗೆ ನಿಂತರಾ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ? ಮಹಿಳಾ ಅರಣ್ಯಾಧಿಕಾರಿಗೆ ಏಕಾಏಕಿ ವರ್ಗಾವಣೆ ಯಾಕೆ? ಇದರ ಹಿಂದಿನ ಮಸಲತ್ತೇನು?

Ad Widget . Ad Widget .

ಸಮಗ್ರ ವರದಿ: ಅರಣ್ಯ ಸಂಚಾರಿ ದಳ ಉಡುಪಿ ವಲಯ ಅರಣ್ಯಾಧಿಕಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಅರಣ್ಯ ಸಂಚಾರಿ ದಳದ ಪ್ರಭಾರ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದ ಸಂಧ್ಯಾ ಸಚಿನ್ ಅವರನ್ನು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಮುಖ್ಯಮಂತ್ರಿಗೆ ಮನವಿ ಮಾಡಿ ಬೀದರ್ ನ ನೌಬಾದ್ ಅರಣ್ಯ ತರಬೇತಿ ಕೇಂದ್ರಕ್ಕೆ ವರ್ಗಾವಣೆ ಮಾಡಿರುವುದು ರಾಜಕೀಯ ದ್ವೇಷ ಮತ್ತು ದಂಧೆಕೋರರ ಮಸಲತ್ತು ಎಂಬ ಮಾತುಗಳು ಕೇಳಿಬರುತ್ತಿದೆ. ಮರಗಳ್ಳರಿಗೆ ಬೆಳ್ತಂಗಡಿ ಶಾಸಕರೇ ರಕ್ಷಕರಾದರಾ? ಎಂಬ ಅನುಮಾನ ಈಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Ad Widget . Ad Widget .

ಈ ವರ್ಗಾವಣೆಯ ವಿಷಯ ಹೊರ ಬರುತ್ತಿದ್ದಂತೆ ಬಿಜೆಪಿ ಪಕ್ಷದಲ್ಲೂ ಅಸಮಾಧಾನ ಹೊರಬಿದ್ದಿದ್ದು, ರಾಜಕೀಯ ಪ್ರೇರಿತವಾಗಿಯೇ ವರ್ಗಾವಣೆ ಮಾಡಲಾಗಿದೆ ಎಂದು ಅರಣ್ಯಾಧಿಕಾರಿ ಸಂದ್ಯಾ ಸಚಿನ್ ಆರೋಪಿಸಿದ್ದಾರೆ. ಇದರಿಂದಾಗಿ ಶಾಸಕ ಹರೀಶ್ ಪೂಂಜಾ ಹಾಗೂ ಮಹಿಳಾ ಅರಣ್ಯಾಧಿಕಾರಿಯ ನಡುವಿನ ಶೀತಲ ಸಮರ ಬೀದಿಗೆ ಬಂದಿದೆ ಎಂದು ಹೇಳಲಾಗಿದೆ.

ಈ ವರ್ಗಾವಣೆ ಕುರಿತು ಅಧಿಕಾರಿ ಸಂಧ್ಯಾ ಸಚಿನ್ ಬೆಳ್ತಂಗಡಿಯ ಶ್ರೀಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಪತ್ರ ಬರೆದಿದ್ದು, ಅದರಲ್ಲಿ “ದಿನಾಂಕ 26-1-2022ರಂದು ಹರೀಶ್ ಪೂಂಜಾ ಬೆಳ್ತಂಗಡಿ ಇವರು ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ಬೀದರ್ ಅರಣ್ಯ ತರಬೇತಿ ಕೇಂದ್ರಕ್ಕೆ ವರ್ಗಾಯಿಸಿರುತ್ತಾರೆ. ಇದು ವೈಯಕ್ತಿಕ ದ್ವೇಷದಿಂದ ಮಾಡಿದ ವರ್ಗಾವಣೆಯಾಗಿದ್ದು ಏಕಪಕ್ಷೀಯ ಆದೇಶವಾಗಿರುತ್ತದೆ. ಬೆಳ್ತಂಗಡಿ ತಾಲೂಕಿನ ಅಕ್ರಮ ಮರಗಳ ಸಾಗಾಟಗಾರರ ಮರಮಟ್ಟು ಹಾಗೂ ವಾಹನಗಳನ್ನು ಇಲಾಖೆ ವಶಪಡಿಸಿರುವ ಕಾರಣ ಶಾಸಕರು ಕೋಪಗೊಂಡು ಈ ಕೆಲಸ ಮಾಡಿರುತ್ತಾರೆ. ನನ್ನ ಮೇಲಿನ ಅಧಿಕಾರಿಗಳ ಆದೇಶದ ಮೇರೆಗೆ ನಾನು ಅಕ್ರಮ ಮರ ದಾಸ್ತಾನುಗಳಿಗೆ ದಾಳಿ ನಡೆಸಿ, ಪ್ರಕರಣ ದಾಖಲಿಸಿರುತ್ತೇನೆ. ಇದು ಇಲಾಖಾ ಮಧ್ಯದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆಯಾಗಿರುತ್ತದೆ. ಆದರೆ ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜಾ ಇವರು ನನ್ನಲ್ಲಿ ವೈಯಕ್ತಿಕ ದ್ವೇಷ ಹಗೆತನ ಸಾಧಿಸಿ ಅಕ್ರಮ ಮರಗಳ್ಳರಾದ ಬಾಲಕೃಷ್ಣ ಶೆಟ್ಟಿ ಬದ್ಯಾರು ಇನ್ನಿತರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಹಿಳಾ ಅಧಿಕಾರಿಯಾದ ನನ್ನನ್ನು ದೂರದ ಬೀದರ್‌ಗೆ ವರ್ಗಾಯಿಸಿರುತ್ತಾರೆ. ಬಿಲ್ಲವ ಸಮಾಜದವಳಾದ ನಾನು ನಿಮ್ಮಲ್ಲಿ ವಿನಂತಿಸುವುದೇನೆಂದರೆ ನನ್ನ ಮೇಲಿನ ದಬ್ಬಾಳಿಕೆಯನ್ನು ಖಂಡಿಸಿ ನನಗೆ ನ್ಯಾಯ ಕೋಡಿಸಬೇಕಾಗಿ ವಿನಂತಿ” ಎಂದು ಪತ್ರ ಬರೆದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಪೋಸ್ಟ್ ಗಳು ವೈರಲ್ ಆಗಿದ್ದು, ಮುಖ್ಯಮಂತ್ರಿ ಸಹಿ ಮಾಡಿದ ಬೆಳ್ತಂಗಡಿ ಶಾಸಕರು ಬರೆದ ವರ್ಗಾವಣೆ ಆದೇಶ ಪ್ರತಿ ಜೊತೆ ಬೆಳ್ತಂಗಡಿಯಲ್ಲಿ “ಮತ್ತೆ ಬಿಲ್ಲವರ ಮೇಲೆ ದಬ್ಬಾಳಿಕೆ – ಅಕ್ರಮ ಬಯಲಿಗೆಳೆದ ಬಿಲ್ಲವ ಮಹಿಳಾ ಅಧಿಕಾರಿಯನ್ನು ದೂರದ ಬೀದರ್ ಗೆ ವರ್ಗಾವಣೆ” ಎಂದು ಸಂದೇಶಗಳು ರವಾನೆಯಾಗುತ್ತಿದೆ.

ಉಡುಪಿಯ ಅರಣ್ಯ ಅಧಿಕಾರಿಯ ವರ್ಗಾವಣೆಗೆ ಬೆಳ್ತಂಗಡಿಯ ಶಾಸಕರು ಪತ್ರ ಬರೆದು ವರ್ಗಾವಣೆಗೊಂಡ ಕಾರಣ ಉಡುಪಿ ಹಾಗೂ ದಕ್ಷಿಣಕನ್ನಡದ ಬಿಜೆಪಿ ಕೆಲ ಶಾಸಕರು ಹಾಗೂ ಬಿಜೆಪಿಯ ಇನ್ನೊಂದು ಬಣ ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ ಅಬಕಾರಿ ಅಧಿಕಾರಿ ಸೌಮ್ಯ ನಾಯ್ಕ್ ಎನ್ನುವವರನ್ನು ಕೆಲವು ದಾಳಿ ನಡೆಸಿದ ನಂತರ ಬೆಳ್ತಂಗಡಿಯಿಂದ ಗುಲ್ಬರ್ಗದ ಹುಮನಬಾದ್ ಗೆ ವರ್ಗಾಯಿಸಲಾಗಿದೆ ಎನ್ನಲಾಗುತ್ತಿದೆ.

ಮಹಿಳಾ ಅಧಿಕಾರಿಯ ಈ ಆರೋಪಗಳ ಕುರಿತು ಶಾಸಕರೇ ಅನುಮಾನ ಬಗೆಹರಿಸಬೇಕಿದ್ದು, ಅವರ ಪ್ರತಿಕ್ರಿಯೆಗಾಗಿ ನಿರೀಕ್ಷಿಸಲಾಗುತ್ತಿದೆ.

Leave a Comment

Your email address will not be published. Required fields are marked *