ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಶ್ರೀ ಮಹಾದೇವಿ 370 ಹೆಸರಿನ ದೋಣಿ ಮಗುಚಿ ಬಿದ್ದಿದ್ದು, ದೋಣಿಯಲ್ಲಿದ್ದ ಎಲ್ಲಾ ಆರು ಮೀನುಗಾರರನ್ನು ರಕ್ಷಿಸಲಾಗಿದೆ.
ಜ. 24 ರಂದು ಬೆಳಿಗ್ಗೆ 9 ಗಂಟೆಗೆ ದೋಣಿ ಮಲ್ಪೆ ಬಂದರಿನಿಂದ ಹೊರಟಿದ್ದು, ದಡದಿಂದ ಸ್ವಲ್ಪ ದೂರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ, ದೋಣಿಯ ಕೆಳಭಾಗಕ್ಕೆ ಬಲವಾಗಿ ಏನೋ ಬಡಿದ ಪರಿಣಾಮವಾಗಿ ಮಗುಚಿ ಬಿದ್ದಿದೆ.
ಸಮೀಪದಲ್ಲೇ ಇದ್ದ ರಾಮದೂತ್ ಬೋಟ್ ನ ಮೀನುಗಾರರು ಬೋಟ್ ನ ರಕ್ಷಣೆಗೆ ಧಾವಿಸಿದ್ದು, ದೋಣಿಯನ್ನು ದಡಕ್ಕೆ ಎಳೆಯಲು ಹರಸಾಹಸ ಪಟ್ಟರು. ಆದರೆ ನೀರು ವೇಗವಾಗಿ ದೋಣಿಗೆ ನುಗ್ಗಿದ್ದರಿಂದ ಸಂಜೆ ವೇಳೆಗೆ ದೋಣಿ ಮುಳುಗಿತು. ಬೋಟ್‌ನಲ್ಲಿದ್ದ ಆರು ಮಂದಿ ಮೀನುಗಾರರನ್ನು ರಾಮದೂತ್ ಬೋಟ್ ಮೂಲಕ ಮಲ್ಪೆ ಬಂದರಿಗೆ ಕರೆತರಲಾಯಿತು.
ಬೋಟ್‌ನೊಂದಿಗೆ ಮುಳುಗಿದ ಬಲೆ, ಡೀಸೆಲ್ ಮತ್ತು ಮೀನು ಹಿಡಿಯುವ ಸಾಧನದ ನಷ್ಟ ಸುಮಾರು 15 ಲಕ್ಷ ರೂಪಾಯಿ ಆಗಿದೆ ಎಂದು ಹೇಳಲಾಗಿದೆ. ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.