Ad Widget .

ನಾಯಕನೆಂದರೆ ಹೀಗಿರಬೇಕು| ಬಡವರ ಮೊಗದಲ್ಲಿ ಮಂದಹಾಸ ಮೂಡಿಸುತ್ತಿರುವ “ಚಂದ್ರಹಾಸ”!

Ad Widget . Ad Widget .

ಸಮಗ್ರ ವಿಶೇಷ: ಜನಸಾಮಾನ್ಯರ ಬದುಕನ್ನು ನೆಮ್ಮದಿಯ ಹಳಿಗಳ ಮೇಲೆ ಸಾಗುವಂತೆ ಮಾಡುವ ಜವಾಬ್ದಾರಿ ಹೊತ್ತುಕೊಂಡ ಒಂದು ವ್ಯವಸ್ಥೆಗೆ ರಾಜಕೀಯ ಅಥವಾ ರಾಜಕಾರಣ ಎನ್ನುತ್ತಾರೆ. ಇಷ್ಟೊಂದು ಒಳ್ಳೆಯ ಅರ್ಥಗರ್ಭಿತ ವ್ಯವಸ್ಥೆಗೆ ಇತ್ತೀಚೆಗೆ ಯಾವೊಬ್ಬ ಪ್ರಜೆಯೂ ಗೌರವ ಕೊಡುತ್ತಿಲ್ಲ. ಕೆಲವು ಕಡೆಗಳಲ್ಲಿ ಆಗುತ್ತಿರುವ ಭ್ರಷ್ಟಾಚಾರ, ಹಾಗೂ ಕೆಲವರ ಸರ್ವಾಧಿಕಾರದಿಂದ ಬೇಸತ್ತು ಹೋಗಿರುವ ಪ್ರಜೆಗಳಿಗೆ ರಾಜಕೀಯ ಅನ್ನುವುದು ಹೊಲಸಿಗಿಂತ ಕಡೆಯಾಗಿ ಹೋಗುತ್ತಿದೆ. ಇಂತಹ ವಾತಾವರಣಗಳ ನಡುವೆ ಜನರನ್ನು ಹೇಗೆ ತಲುಪಬೇಕು?, ಅವರ ಮನ ಪರಿವರ್ತನೆ ಮಾಡುವುದು ಹೇಗೆ? ಎಂಬ ಯೋಚನೆ ಬರುವುದು ಚುನಾವಣಾ ಸಂದರ್ಭಗಳಲ್ಲಿ ಮಾತ್ರ.

Ad Widget . Ad Widget .

ಮತ ಗಿಟ್ಟಿಸಿಕೊಳ್ಳುವುದಕ್ಕಾಗಿಯೇ ‘ಜನನಾಯಕ’ ಎಂಬ ನಾಟಕ ಪ್ರದರ್ಶಿಸುವ ಈ ಪ್ರಪಂಚದಲ್ಲಿ ನಾನೊಬ್ಬ ನಿಜವಾದ ನಾಯಕ, ಜನರ ಕಷ್ಟಗಳಿಗೆ ಸ್ಪಂದಿಸುವ ಹೃದಯವಂತ, ನನ್ನಿಂದಾದಷ್ಟು ಏನಾದರೂ ಸರಿ ಜನರಿಗೆ ಸಹಕಾರಿಯಾಗಲಿ ಎಂಬ ಭಾವನೆ ಮತ್ತು ಬುದ್ದಿವಂತಿಕೆಯನ್ನು ಉಪಯೋಗಿಸಿಕೊಳ್ಳುವಷ್ಟು ಯೋಚನೆ ಈಗಿನ ನಾಯಕರಿಗೆ ಇರುವುದು ತುಂಬಾ ಅಪರೂಪ.

ಆದರೆ ಇಲ್ಲೊಬ್ಬ ಯುವಕನ ಸಣ್ಣ ಸಾಧನೆ ಮತ್ತು ಛಲ ಒಬ್ಬ ನಾಯಕ ಎನಿಸಿಕೊಂಡವನು ತಕ್ಕ ಮಟ್ಟಿಗೆ ಹೇಗೆ ಇರಬೇಕು?, ಅನ್ನುವುದಕ್ಕೆ ಒಂದು ಸಣ್ಣ ಉದಾಹರಣೆ.

ಕೊರೋನ ಎಂಬ ಮಹಾಮಾರಿಯ ಸವಾರಿ ಇಡೀ ದೇಶಕ್ಕೆ ಅಪ್ಪಳಿಸಿ, ಇಡೀ ದೇಶ ಲಾಕ್ ಡೌನ್ ಎಂಬ ಅಸ್ತ್ರವನ್ನು ಉಪಯೋಗಿಸಿದಾಗ ದೇಶದ ಪ್ರತಿಯೊಂದು ಮೂಲೆಯಲ್ಲಿಯೂ ಕೂಡ ಶ್ರೀಮಂತ ಬಡವರೆಲ್ಲರೂ ಒಂದೇ ರೀತಿ ಜೀವನ ಸಾಗಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಆ ಸಂದರ್ಭದಲ್ಲಿ ಅತಿ ಹೆಚ್ಚು ಪ್ರಚಾರವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರ ಮಂಗಲ ಗ್ರಾಮ. ಯಾಕೆಂದರೆ ಗ್ರಾಮೀಣ ಭಾಗದ ಯುವಕನೊಬ್ಬ ಮತ್ಸ್ಯ ಮಾರಾಟ ಮಾಡಿ ಎಲ್ಲರನ್ನು ಗಮನ ಸೆಳೆದಿದ್ದ.

ಪುತ್ತೂರಿನ ಖಾಸಾಗಿ ಕಾಲೇಜೊಂದರ ಕಾನೂನು ಪದವಿ ವಿದ್ಯಾರ್ಥಿಯಾಗಿದ್ದಾಗ ಶಾಲಾ ಕಾಲೇಜ್ ಗಳಿಗೆ ಕೊರೋನ ನಿಮಿತ್ತ ರಜೆ ನೀಡಿದ ಸಂದರ್ಭದಲ್ಲಿ ಈಶ್ವರಮಂಗಲದಲ್ಲಿ ಮೀನು ಮಾರಾಟ ಮಾಡಿ ಮನಸ್ಸಿದ್ದರೆ ಯಾರು ಯಾವ ಕೆಲಸವನ್ನಾದರೂ ಮಾಡಬಹುದೆಂಬ ಸಂದೇಶ ರವಾನಿಸಿದ್ದ. ಆತನೇ ಚಂದ್ರಹಾಸ ಈಶ್ವರಮಂಗಲ.

ಪುಟ್ಟ ಗ್ರಾಮೀಣ ಭಾಗದ ಚಂದ್ರಹಾಸ್ ಅವರು ಬಹಳಷ್ಟು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಕಾರಣ ಅವರಲ್ಲಿರುವ ಒಳ್ಳೆಯ ಗುಣ, ಛಲ, ಸಾಧನೆ. ಒಬ್ಬ ಮನುಷ್ಯ ಎಷ್ಟೆ ಸಣ್ಣ ಕೆಲಸವಾದರೂ ಸರಿ, ದೊಡ್ಡ ಕೆಲಸವಾದರು ಸರಿ ಅವನ ಜೀವನದಲ್ಲಿ ಅದೆಲ್ಲವೂ ಸಾಧನೆಯ ಮೆಟ್ಟಿಲುಗಳಾಗಿರುತ್ತದೆ. ಹನಿ ಹನಿ ಸೇರಿದರಷ್ಟೆ ಹಳ್ಳ ಅನ್ನುವುದನ್ನು ಮನುಷ್ಯ ಜೀವನದುದ್ದಕ್ಕೂ ಯೋಚಿಸಿಬೇಕು. ಇದು ಮುಂದಿನ ದಿನಗಳಲ್ಲಿ ಮಹತ್ತರವಾದ ಪ್ರಶಂಸೆಗೆ ಕಾರಣವಾಗುತ್ತದೆ.

ಒಂದು ಜವಾಬ್ದಾರಿಯನ್ನು ಹೊತ್ತಾಗ ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವ ಚಾಣಾಕ್ಷತನ ಅವನಲ್ಲಿರಬೇಕು. ಕೇವಲ ಹೆಸರಿಗಷ್ಟೆ ಕೈಮುಗಿದು ಜನರ ಮುಂದೆ ನಾಟಕವಾಡುವುದಕ್ಕಿಂತ ಸಿಕ್ಕ ಸಮಯವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ ಊರು ಕೇರಿ ಮಾತ್ರವಲ್ಲ ಇಡೀ ದೇಶದ ಗಮನ ಸೆಳೆಯುವಲ್ಲಿ ಅನುಮಾನವಿಲ್ಲ.

ಆಂದು ಮೀನು ಮಾರಾಟ ಮಾಡಿದ ಚಂದ್ರಹಾಸ್ ಈಗ ನೆಟ್ಟಣಿಗೆ ಮೂಡ್ನೂರು ಗ್ರಾಮ ಪಂಚಾಯತ್ ನ ಸದಸ್ಯರಾಗಿದ್ದಾರೆ. ಕೇವಲ ಸದಸ್ಯರಾಗಿ ಕೈಕಟ್ಟಿ ಕುಳಿತುಕೊಂಡಿಲ್ಲ, ಒಬ್ಬ ಗ್ರಾಮ ಪಂಚಾಯತ್ ಸದಸ್ಯನಾಗಿ ಏನು ಮಾಡಬೇಕು ಅದನ್ನು ಸೈಲೆಂಟಾಗಿಯೆ ಮಾಡುತ್ತಿದ್ದಾರೆ.
ಸರಕಾರದಿಂದ ಸಿಗುವ ಪ್ರತಿಯೊಂದು ಯೋಜನೆಯನ್ನು ಮನೆ ಮನೆಗೆ ತಿಳಸುವಲ್ಲಿ ಹಾಗೂ ಯೋಜನೆಯ ಸವಲತ್ತು ಪಡೆದುಕೊಳ್ಳಲು ಅವರು ವಾರ್ಡ್ ನಲ್ಲಿ ಓಡಾಡುತ್ತಿದ್ದಾರೆ. ಇದುವರೆಗೆ 157 ಜನರಿಗೆ ಪಿಂಚಣಿ ವ್ಯವಸ್ಥೆ ಮಾಡಲಾಗಿದ್ದಾರೆ. ಕಳೆದ ವಾರವಷ್ಟೆ 158 ನೇ ಪಿಂಚಣಿಯ ವ್ಯವಸ್ಥೆಯನ್ನು ಮಾಡಿಸಿಕೊಟ್ಟಿದ್ದಾರೆ.

ಸಣ್ಣ ಸಣ್ಣ ಕೆಲಸಗಳಿಂದ ಜನರ ಪ್ರೀತಿಯನ್ನು ಗಳಿಸುವುದರೊಂದಿಗೆ ಜನಮನ್ನಣೆ ಗಳಿಸಿದಾಗ ಮಾತ್ರ ಒಬ್ಬ ಜನನಾಯಕನಾಗಿ ಜನ ಒಪ್ಪುವುದಕ್ಕೆ ಸಾಧ್ಯ. ಚಂದ್ರಹಾಸ್ ರವರ ಈ ಸಾಧನೆ ಮತ್ತು ಛಲ ಉಳಿದ ನಾಯಕರುಗಳಿಗೂ ಒಂದು ಉತ್ತಮ ಸಂದೇಶವಾಗಲಿ ಎಂಬುದೆ ನಮ್ಮ ಆಶಯ.

ಹರೀಶ್ ಪುತ್ತೂರು
ಯುವ ಬರಹಗಾರರು ದ.ಕ

Leave a Comment

Your email address will not be published. Required fields are marked *