Ad Widget .

ಮಕ್ಕಳಿಲ್ಲದ ಈ ತಾಯಿಗೆ ಊರೆಲ್ಲಾ ಮಕ್ಕಳು| ವಿದ್ಯಾದಾನಕ್ಕೆ ನೆರವಾದ ಮಹಾಮಾತೆ|

ಕೊಪ್ಪಳ: ಈಕೆಗೆ ಮಕ್ಕಳು ಇಲ್ಲ. ಜೀವನಕ್ಕಾಗಿದ್ದ ಭೂಮಿಯನ್ನು ತನ್ನೂರಿನ ಶಾಲೆಗೆ ದಾನ ಮಾಡಿದ ಮಹಾತಾಯಿ ಇವರು. ಇದ್ದ ಜಮೀನು ದಾನವಾಗಿ ನೀಡಿದ ನಂತರ ಅದೇ ಶಾಲೆಯಲ್ಲಿ ಮುಖ್ಯ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದಾರೆ. ದಿನನಿತ್ಯ ಮಕ್ಕಳಿಗೆ ಅಡುಗೆ ಮಾಡುವ ಮೂಲಕ ಜೀವನದ ಸಂತೋಷವನ್ನು ಕಂಡು ಕೊಂಡಿದ್ದಾರೆ.

Ad Widget . Ad Widget .

ಕೊಪ್ಪಳ ಜಿಲ್ಲೆಯ ಕುಣಿಕೇರಿ ಗ್ರಾಮದಲ್ಲಿ ಈ ತಾಯಿ ವಾಸವಾಗಿದ್ದಾರೆ. ಈ ಮಹಾತಾಯಿ ಹೆಸರು ಹುಚ್ಚಮ್ಮ ಚೌದ್ರಿ(75).

Ad Widget . Ad Widget .

ಗಂಡ ಬಸಪ್ಪ ಚೌದ್ರಿ ಜೊತೆ ಸಂಸಾರ‌ ನಡೆಸುತ್ತಿದ್ದ ಹುಚ್ಚಮ್ಮ ಗಂಡನ ನಿಧನದಿಂದ ಏಕಾಂಗಿಯಾದರು. ಊರ ಪಕ್ಕದಲ್ಲಿಯೇ ಇರುವ 2 ಎಕರೆ ಭೂಮಿಯಲ್ಲಿ ಕೃಷಿ ಮಾಡಿ ಬದುಕುತ್ತಿದ್ದರು. ಆದರೆ ಇದೇ ಸಮಯದಲ್ಲಿ ಕುಣಿಕೇರಿ ಗ್ರಾಮದಲ್ಲಿರುವ ಶಾಲೆಗೆ ಹೊಸ ಕಟ್ಟಡ ನಿರ್ಮಿಸಬೇಕಾಗಿತ್ತು. ಆದರೆ ಊರಿನಲ್ಲಿ ಜಮೀನು ನೀಡುವವರು ಯಾರು ಇರಲಿಲ್ಲ. ಈ ಮಧ್ಯೆ ಹುಚ್ಚಮ್ಮ ತನ್ನೂರಿನ ಶಾಲಾ ಮಕ್ಕಳಿಗೆ ಭೂಮಿಯನ್ನು ದಾನವಾಗಿ ನೀಡಲು ಮುಂದಾಗಿದ್ದರು. ಮೊದಲು ಒಂದು ಎಕರೆ ಭೂಮಿಯನ್ನು ಶಾಲೆಗೆ ನೀಡಿದರು.

ಆದರೆ ಮಕ್ಕಳ ಆಟಕ್ಕಾಗಿ ಭೂಮಿ ಅವಶ್ಯವಾಗಿತ್ತು. ಈ ಕಾರಣಕ್ಕಾಗಿ ತಮ್ಮ ಹೆಸರಿನಲ್ಲಿರುವ ಎರಡೂ ಎಕರೆ ಭೂಮಿಯನ್ನು ಶಾಲೆ ನಿರ್ಮಾಣಕ್ಕಾಗಿ ಭೂಮಿ ದಾನ ಮಾಡಿದ್ದಾರೆ.

ಸದ್ಯ ಹುಚ್ಚಮ್ಮ ಅವರ ಭೂಮಿಯಲ್ಲಿ ಸುಸಜ್ಜಿತ ಶಾಲೆ ನಿರ್ಮಾಣವಾಗಿದೆ. ಈ ಮಧ್ಯೆ ಗಂಡನಿಲ್ಲ, ಮುಂದೇ ನಿನ್ನ ಜೀವನಕ್ಕೇನು ಮಾಡುತ್ತಿ ಎಂದು ಕೇಳಿದಾಗ ಯಾರಾದರೂ ಎರಡು ಹೊತ್ತು ಊಟ ನೀಡಿದರೆ ಸಾಕು ಎಂದಿದ್ದರು. ಇದೀಗ ತಾವೇ ದಾನವಾಗಿ ನೀಡಿದ ಭೂಮಿಯಲ್ಲಿ ನಿರ್ಮಾಣವಾದ ಶಾಲೆಯಲ್ಲಿ ಅಡುಗೆ ತಯಾರಕರಾಗಿ ಕೆಲಸ ಮಾಡುತ್ತಿದ್ದಾರೆ.

ತನಗೆ ಮಕ್ಕಳಿಲ್ಲ ಎಂಬ ಕೊರಗು ಇಲ್ಲ. ಶಾಲೆಯಲ್ಲಿರುವ 300 ಕ್ಕೂ ಅಧಿಕ ಶಾಲಾ ಮಕ್ಕಳು ತನ್ನ ಮಕ್ಕಳು ಎಂದುಕೊಂಡು ನಿತ್ಯ ಕಾಳಜಿಯಿಂದ ಬಿಸಿಯೂಟ ತಯಾರಿ ಮಾಡಿ ಪ್ರೀತಿಯಿಂದ ಉಣಬಡಿಸುತ್ತಿದ್ದಾರೆ. ಶಾಲೆಯ ಎಲ್ಲಾ ಮಕ್ಕಳು ತನ್ನ ಮಕ್ಕಳು ಎಂದುಕೊಂಡಿದ್ದಾರೆ.

ಕುಣಿಕೇರಿ ಭಾಗದಲ್ಲಿ ಉಕ್ಕಿನ ಕಾರ್ಖಾನೆಗಳು ನಿರ್ಮಾಣವಾಗಿವೆ. ಕಾರ್ಖಾನೆಗಳಿಂದಾಗಿ ಇಲ್ಲಿಯ ಭೂಮಿಯ ಬೆಲೆ ಗಗನಕ್ಕೇರಿದೆ. ಕುಣಿಕೇರಿ ಶಾಲೆಗೆ ಹುಚ್ಚಮ್ಮ ನೀಡಿದ ಭೂಮಿಯ ಬೆಲೆ ಈಗಿನ ಮಾರುಕಟ್ಟೆಯ ದರಕ್ಕೆ ಹೊಲಿಸಿದರೆ ಕನಿಷ್ಠವೆಂದರೂ 1 ಕೋಟಿ ರೂಪಾಯಿ ಬೆಲೆಬಾಳುತ್ತದೆ. ಬೆಲೆ ಬಾಳುವ ಭೂಮಿ ದಾನವಾಗಿ ನೀಡಿದ್ದೇನೆ. ಇದರಿಂದಾಗಿ ತನಗೆ ಸಾಕಷ್ಟು ಹಣ ಬರುತ್ತಿತ್ತು ಎಂಬ ಭಾವನೆ ಇಲ್ಲ. ಇರುವವರಿಗೂ ನನ್ನ ಹೊಟ್ಟೆ ತುಂಬಿದರೆ ಸಾಕು ಎಂಬ ಭಾವನೆ ಮಾತ್ರ ಸಾಕು ಎಂಬ ನಿಸ್ವಾರ್ಥ ಭಾವನೆಯಿಂದಾಗಿ ಹುಚ್ಚಮ್ಮ ವಿಶೇಷವಾಗಿ ಕಾಣುತ್ತಾರೆ.

ಈಗ 75ನೇ ವಯಸ್ಸಿನಲ್ಲಿ ನಿತ್ಯ ಶಾಲೆಯಲ್ಲಿ ಬಿಸಿಯೂಟ ಮಾಡುವ ಅಜ್ಜಿ, ಶಾಲೆ ಇಲ್ಲದ ದಿನಗಳಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ತನ್ನೂರಿನ ಶಾಲೆಗಾಗಿ ಭೂಮಿ ನೀಡಿದ ಹುಚ್ಚಮ್ಮ ಅವರಿಗೆ ಸಾಕಷ್ಟು ಕಡೆ ಸನ್ಮಾನ ಮಾಡಿ ಗೌರವಿಸಲಾಗಿದೆ. ಸನ್ಮಾನದಿಂದ ಬೀಗದೇ ತಾನಾಯಿತು, ತನ್ನ ಕೆಲಸವಾಯಿತು ಎಂದುಕೊಂಡು ಹುಚ್ಚಮ್ಮ ಜೀವನ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *