ಪಣಜಿ: ಯುಪಿ ಜೊತೆಗೆ ಇದೀಗ ಗೋವಾದಲ್ಲೂ ಚುನಾವಣಾ ಪ್ರಚಾರ ಜೋರಾಗಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಬಿಜೆಪಿ ಶಾಸಕರ ರಾಜೀನಾಮೆ ಸಮಸ್ಯೆ ಮಾತ್ರವಲ್ಲ, ಹೊಸ ಆತಂಕಕ್ಕೂ ಕಾರಣವಾಗಿದೆ. ಮಾಜಿ ರಕ್ಷಣಾ ಸಚಿವ ಮತ್ತು ಮಾಜಿ ಗೋವಾ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಅವರ ಮಗ ಬಂಡಾಯ ನಡೆ ತೋರಿಸಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಯಾರಾಗಿದ್ದಾರೆ.
ಕಳೆದ 25 ವರ್ಷಗಳಿಂದಲೂ ಮನೋಹರ್ ಪರಿಕ್ಕರ್ ಪ್ರತಿನಿಧಿಸುತ್ತಿದ್ದ ಪಣಜಿ ವಿಧಾನಸಭಾ ಕ್ಷೇತ್ರದಿಂದ ಉತ್ಪಲ್ ಬದಲಿಗೆ ಪಟ್ನೇಕರ್ ಅವರಿಗೆ ಟಿಕೆಟ್ ನೀಡಿ ಬಿಜೆಪಿ ಹೈಕಮಾಂಡ್ ನಿನ್ನೆ ಘೋಷಣೆ ಮಾಡಿತ್ತು. ಈ ಹಿನ್ನಲೆಯಲ್ಲಿ ಪರಿಕ್ಕರ್ ಮಗ ಉತ್ಪಲ್ ಈ ಕ್ಷೇತ್ರದಿಂದಲೇ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ. ಈ ಮೂಲಕ ತಂದೆಯ ಕ್ಷೇತ್ರದಿಂದಲೇ ರಾಜಕೀಯ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಉತ್ಪಲ್ ಪರಿಕ್ಕರ್ ಗೆ ಬಿಜೆಪಿ ಟಿಕೆಟ್ ನಿರಾಕರಣೆ ಮಾಡುತ್ತಿದ್ದಂತೆ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ ಪಕ್ಷ ಸೇರುವಂತೆ ಆಹ್ವಾನ ನೀಡಿದ್ದರು. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡದ ಉತ್ಪಲ್ ಶುಕ್ರವಾರ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮಹತ್ವದ ಘೋಷಣೆ ಮಾಡಿದ್ದಾರೆ.
ಉತ್ಪಲ್ ರ ಈ ನಡೆ ಗೋವಾ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.