ಉಡುಪಿ: ವಾರಾಂತ್ಯ ಕರ್ಫ್ಯೂ ರದ್ದು ಮಾಡಬೇಕು ಅಥವಾ ಎಲ್ಲ ಉದ್ಯಮಗಳಿಗೂ ವಾರಾಂತ್ಯದಲ್ಲಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಬೇಕು. ಇಲ್ಲವಾದರೆ ಸರಕಾರದ ನಿಯಮ ಉಲ್ಲಂಘಿಸಿ ವಾರಾಂತ್ಯದಲ್ಲಿ ವ್ಯಾಪಾರ ವಹಿವಾಟು ನಡೆಸಲು ಕೆನರಾ ಉದ್ಯಮಿಗಳ ಒಕ್ಕೂಟ ನಿರ್ಧರಿಸಿದೆ.
ಉಡುಪಿ ಮತ್ತು ದಕ್ಷಿಣ ಜಿಲ್ಲೆಗಳ ಒಟ್ಟು 40 ವರ್ತಕರ ಸಂಘಟನೆಗಳನ್ನೊಳಗೊಂಡ ಕೆನರಾ ಉದ್ಯಮಿಗಳ ಒಕ್ಕೂಟದ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಸಭೆ ನಡೆಸಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ.
ಒಕ್ಕೂಟದ ಅಧ್ಯಕ್ಷ ಸಂತೋಷ್ ಕಾಮತ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ವ್ಯಾಪಾರಿ ವರ್ಗ ಲಾಕ್‌ಡೌನ್‌ನಿಂದ ಸಾಕಷ್ಟು ಸಂಕಷ್ಟ ಎದುರಿಸಿದೆ. ಸರಕಾರ ಈಗ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿರುವುದು ಅವೈಜ್ಞಾನಿಕ. ಇದರಿಂದ ವರ್ತಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಸರಿಯಲ್ಲ. ನಮಗೂ ವಾರಾಂತ್ಯ ಕರ್ಫ್ಯೂ ವೇಳೆ ವ್ಯಾಪಾರ, ವಹಿವಾಟು ನಡೆಸಲು ಅವಕಾಶ ನೀಡಬೇಕು. ಸರಕಾರ ಕೂಡಲೇ ವಾರಾಂತ್ಯ ಕರ್ಫ್ಯೂ ಹಿಂದಕ್ಕೆ ಪಡೆಯಬೇಕು ಅಥವಾ ಪೂರ್ಣ ಪ್ರಮಾಣದಲ್ಲಿ ಲಾಕ್‌ಡೌನ್ ಮಾಡಬೇಕು. ಕೇವಲ ವರ್ತಕ ವರ್ಗಕ್ಕೆ ಪದೇಪದೆ ಅನ್ಯಾಯ ಮಾಡುವುದು ಸರಿಯಲ್ಲ ಎಂದರು.