ಮೈಸೂರು : ಲಾಕ್ ಡೌನ್, ಕರ್ಫ್ಯೂ ವಿಧಿಸುವುದಾದಾಗಿದ್ದರೆ ವ್ಯಾಕ್ಸಿನ್ ಯಾಕೆ ಬೇಕಿತ್ತು ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಸರಕಾರವನ್ನು ಪ್ರಶ್ನಿಸಿ ಬುಧವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ, ಅವುಗಳಿಗೆ ನಿರ್ಬಂಧವಿಲ್ಲ, ಹೀಗಿರುವಾಗ ಕರ್ನಾಟಕದಲ್ಲಿ ಯಾಕೆ ಕರ್ಫ್ಯೂ, ಲಾಕ್ ಡೌನ್ ಅಂತಾ ಜನರನ್ನು ಮತ್ತೆ ಕಂಗಾಲು ಮಾಡುತ್ತಿದ್ದೀರಿ? ಜನರನ್ನು ಭೀತಿಯಲ್ಲಿ ಇಡುವುದನ್ನು ಮೊದಲು ಸರಕಾರ ನಿಲ್ಲಿಸಲಿ ಎಂದರು.
ಕರ್ಫ್ಯೂ, ಲಾಕ್ ಡೌನ್ ನಿಂದ ಜನರಿಗೆ ಬಹಳ ತೊಂದರೆಯಾಗಿದೆ. ಜನರ ಜೀವನ, ಜೀವ ಎರಡು ಮುಖ್ಯ.ಜೀವ ಉಳಿಸಿ ಕೊಳ್ಳಲು ವ್ಯಾಕ್ಸಿನ್ ಕೊಟ್ಟಿದ್ದೇವೆ. ಈಗ ಜೀವನ ಉಳಿಯ ಬೇಕಾದರೆ ಕರ್ಫ್ಯೂ, ಲಾಕ್ ಡೌನ್ ತೆಗೆಯಿರಿ. ಸಿಎಂ ಈ ಬಗ್ಗೆ ಶುಕ್ರವಾರದ ಸಭೆಯಲ್ಲಿ ಒಳ್ಳೆಯ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಎಲ್ಲಾ ವರ್ಗದ ಜನರಿಗೂ ಕರ್ಫ್ಯೂ, ಲಾಕ್ ಡೌನ್ ನಿಂದ ತೊಂದರೆ ಆಗಿದೆ ಎಂದರು.
ಸಂಸದರ ಈ ಹೇಳಿಕೆ ಜನಸಾಮಾನ್ಯರಿಗೆ ಸಮಾಧಾನ ತಂದಿದ್ದರೆ ಸರ್ಕಾರಕ್ಕೆ ಮುಜುಗರ ಉಂಟಾಗಿದೆ. ಕೊರೊನಾ ಏರುಗತಿಯಲ್ಲಿರುವಾಗ ಸಂಸದರ ಈ ಹೇಳಿಕೆಗೆ ಬಿಜೆಪಿಗರೇ ಕಕ್ಕಾಬಿಕ್ಕಿಯಾಗಿದ್ದಾರೆ.