ಉಡುಪಿ: ಮದುವೆ ಮನೆಗೆ ಹೊರಟಿರುವಂತೆ ಕಾರಿನ ಹೊರಗಡೆ ಸಿಂಗಾರ ಮಾಡಿ, ಒಳಗಡೆ ಹಸುಗಳ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಭಯಾನಕ ಕೃತ್ಯವೊಂದು ಉಡುಪಿಯಲ್ಲಿ ನಡೆದಿದ್ದು, ಖದೀಮರು ಸಿಕ್ಕಿಬಿದ್ದಿದ್ದಾರೆ. ಗೋವುಗಳನ್ನು ಸಾಗಾಟ ಮಾಡಲು ಖದೀಮರು ಕಂಡುಕೊಂಡಿರುವ ಹೊಸ ಮಾರ್ಗ ಎಲ್ಲರನ್ನೂ ದಂಗುಬಡಿಸಿದೆ.
ಉಡುಪಿ ಜಿಲ್ಲೆ ಕಾಪು ತಾಲೂಕಿನ ಶಿರ್ವದಲ್ಲಿ ಈ ಘಟನೆ ನಡೆದಿದ್ದು, ಇನ್ನೋವಾ ಕಾರನ್ನು ಮದುವೆ ಕಾರಿನಂತೆ ಸಿಂಗರಿಸಿಕೊಂಡು ಯಾರಿಗೂ ಅನುಮಾನ ಬಾರದಂತೆ ಮಾಡಲಾಗಿದೆ. ಅದರಲ್ಲಿ ಕದ್ದ ಹಸುಗಳನ್ನು ತುಂಬಿಕೊಂಡು ಸಾಗಿಸಲಾಗುತ್ತಿತ್ತು. ವಿಷಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಗೆ ಗೊತ್ತಾಗಿದ್ದು, ಈ ಕಾರನ್ನು ತಡೆಹಿಡಿದು ಅದರಲ್ಲಿದ್ದ 15 ಕರುಗಳನ್ನು ರಕ್ಷಿಸಿದ್ದಾರೆ.
ಉಡುಪಿ ಸೇರಿದಂತೆ ಕರಾವಳಿ ಭಾಗಗಳಲ್ಲಿ ಹಸುಗಳನ್ನು ಕದ್ದು ಅವುಗಳನ್ನು ಸಾಗಾಟ ಮಾಡುತ್ತಿರುವ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಅವರ ಮೇಲೆ ದಾಳಿ ನಡೆಯುತ್ತಿದ್ದರೂ ಈ ಅವ್ಯವಹಾರವಂತೂ ನಿಂತಿಲ್ಲ. ಕೆಲ ಘಟನೆಗಳಲ್ಲಿ ಕೇಸ್ ದಾಖಲಾಗಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಖದೀಮರು ಈ ರೀತಿ ಹೊಸ ಹೊಸ ವಿಧಾನಗಳನ್ನು ಕಂಡುಕೊಂಡು ಗೋವುಗಳನ್ನು ಸಾಗಿಸುವ ಕಾರ್ಯ ಮಾಡುತ್ತಲೇ ಇದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಎರಡು ವಾಹನಗಳಲ್ಲಿ 16 ಗೋವುಗಳು ಇದ್ದವು. ಅವುಗಳ ಕೈಕಾಲು ಕಟ್ಟಿಹಾಕಲಾಗಿತ್ತು. ಕುತ್ತಿಗೆಯನ್ನು ಬಿಗಿದಿದ್ದ ಕಾರಣ ಉಸಿರುಗಟ್ಟಿ ಎರಡು ಹಸುಗಳು ಮೃತಪಟ್ಟಿವೆ. ಇದರಿಂದ ಆಕ್ರೋಶಗೊಂಡ ಹಿಂದು ಜಾಗರಣ ವೇದಿಕೆ ಸದಸ್ಯರು ಕಾರಿನ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಪೊಲೀಸರು ಬಂದಿದ್ದರಿಂದ ಖದೀಮರು ಕಾರು ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.