ಮಂಗಳೂರು: ಲೋನ್ ಆಯಪ್ ಮೂಲಕ ಸಾಲ ಪಡೆದು ಕಿರುಕುಳ ತಡೆಯಲಾರದೆ ಎರಡು ದಿನಗಳ ಹಿಂದೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಹೀಗಾಗಿ, ಸಾರ್ವಜನಿಕರು ಲೋನ್ ಆ್ಯಪ್ ಇನ್ಸ್ಟಾಲ್ ಮಾಡುವಾಗ ಜಾಗ್ರತೆಯಿಂದ ಇರುವಂತೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಸಲಹೆ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಎರಡು ದಿನಗಳ ಹಿಂದೆ ಸುರತ್ಕಲ್ನ ಕುಳಾಯಿಯಲ್ಲಿ ಯುವಕನೋರ್ವ ತನ್ನ ಕಚೇರಿಯಲ್ಲಿ ಬಾತ್ ಟವೆಲ್ ಮೂಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದ ಬಗ್ಗೆ ವಿವರಿಸಿದರು.
ಯುವಕ ಡೆತ್ ನೋಟ್ನಲ್ಲಿ ಲೋನ್ ಆ್ಯಪ್‌ನಲ್ಲಿ ಸಾಲ ಪಡೆದು ಕಿರುಕುಳ ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದುಕೊಂಡಿದ್ದಾನೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆತನ ಮೊಬೈಲ್ ಪರಿಶೀಲನೆ ನಡೆಸಿದಾಗ ಲೋನ್ ಕೊಡುವ ಆ್ಯಪ್ ಗಳು ಲಭ್ಯವಾಗಿವೆ. ಅದರಲ್ಲಿ ಈತ ಸಣ್ಣ ಪ್ರಮಾಣದಲ್ಲಿ ಸಾಲ ಪಡೆದಿದ್ದು, ಅದನ್ನು ಮರುಪಾವತಿಸಲು ಕಿರುಕುಳ ನೀಡುತ್ತಿರುವುದು ಮತ್ತು ಅದಕ್ಕೆ ಸಂಬಂಧಿಸಿದ ಆಡಿಯೋಗಳು ದೊರಕಿವೆ ಎಂದು ಮಾಹಿತಿ ನೀಡಿದರು.
ಯುವಕನಿಗೆ ಫೋನ್ ಮಾಡಿ ‘ನಿನ್ನ ಬೆತ್ತಲೆ ಫೋಟೋಗಳು ಇವೆ. ನಿನ್ನ ಸಂಪರ್ಕದ ಸಂಖ್ಯೆಗೆ ಕಳುಹಿಸುತ್ತೇವೆ’ ಎಂದು ಬೆದರಿಕೆ ಹಾಕಿರುವುದು ಮತ್ತು ಕೆಟ್ಟ ಕೆಟ್ಟ ಪದಗಳನ್ನು ಬಳಸಿ ನಿಂದಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇಂತಹ ಆ್ಯಪ್ಗಳಿಂದ ಇಂತಹದ್ದೇ ಕೆಟ್ಟ ಕೆಲಸ ನಡೆಯುತ್ತಿರುವ ಬಗ್ಗೆ ತನಿಖೆಯಲ್ಲಿ ಕಂಡುಬಂದರೆ ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಗೂಗಲ್ ಪ್ಲೇ ಸ್ಟೋರ್ನಲ್ಲಿ ಸಿಗುವ ಲೋನ್ ಆ್ಯಪ್ ಇನ್ಸ್ಟಾಲ್ ಮಾಡುವಾಗ ತುಂಬಾ ಎಚ್ಚರಿಕೆಯಿಂದಿರಬೇಕು. ಸುಮಾರು 600 ರಷ್ಟು ಲೋನ್ ಆ್ಯಪ್ಗಳು ಇದ್ದು ಇವುಗಳಿಗೆ ಆರ್ಬಿಐ ಮಾನ್ಯತೆ ಇಲ್ಲ. ಇವು ಸಣ್ಣ ಪ್ರಮಾಣದ ಲೋನ್ಗಳನ್ನು ತಕ್ಷಣವೇ ನೀಡುವ ಆಮಿಷವೊಡ್ಡುತ್ತವೆ. ಈ ಆ್ಯಪ್ ಇನ್ಸ್ಟಾಲ್ ಮಾಡುವ ಸಂದರ್ಭದಲ್ಲಿ ಮೊಬೈಲ್ ಲೊಕೇಶನ್, ಗ್ಯಾಲರಿ, ಕ್ಯಾಮರಾ, ಕಾಂಟ್ಯಾಕ್ಟ್ ಗಳ ಆ್ಯಕ್ಸೆಸ್ ಕೇಳುತ್ತವೆ.
ಹಣ ಸಿಗುವ ಕಾರಣಕ್ಕಾಗಿ ಅದನ್ನು ಒಪ್ಪಿದರೆ ಲೋನ್ ನೀಡಿದ ಬಳಿಕ ಅಧಿಕ ಬಡ್ಡಿ ಜೊತೆಗೆ ಹಣ ವಾಪಸು ಮಾಡದಿದ್ದರೆ ಗ್ಯಾಲರಿಯಲ್ಲಿರುವ ಖಾಸಗಿ ಪೊಟೋಗಳನ್ನು ಪಡೆದು ಕಾಂಟ್ಯಾಕ್ಟ್ಗೆ ಕಳುಹಿಸುವ ಬೆದರಿಕೆಯನ್ನೊಡ್ಡುತ್ತಾರೆ. ಈ ಮೂಲಕ ಕಿರುಕುಳ ನೀಡುವ ಇಂತಹ ಆಯಪ್ಗಳಿಂದ ದೂರ ಇರುವಂತೆ ಪೊಲೀಸ್ ಕಮೀಷನರ್ ಶಶಿಕುಮಾರ್ ಸಲಹೆ ನೀಡಿದ್ದಾರೆ.