ಲಕ್ನೋ: ಕಾಲಭೈರವನಿಗೆ ಪೊಲೀಸ್ ಸಮವಸ್ತ್ರ ತೊಡಿಸಿದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ದೇವರನ್ನು ಕಣ್ತುಂಬಿಕೊಳ್ಳಲು ಭಕ್ತರು ದೇವಸ್ಥಾನದತ್ತ ಆಗಮಿಸುತ್ತಿರುವ ದೃಶ್ಯ ವಾರಣಾಸಿಯಲ್ಲಿ ನಡೆದಿದೆ.
ವಾರಣಾಸಿಯ ಕಾಶಿಯ ಕೊತ್ವಾಲಾ ಎಂದೂ ಕರೆಯಲಾಗುವ ಭೈರವನ ಈ ಸಮವಸ್ತ್ರದ ಸುದ್ದಿ ಭಾರೀ ವೈರಲ್ ಆಗುತ್ತಿದೆ. ಇದೇ ಮೊದಲ ಬಾರಿಗೆ ಕಾಶಿಯ ಪ್ರಸಿದ್ಧ ದೇವರು ಬಾಬಾ ಕಾಲ ಭೈರವನಿಗೆ ಪೊಲೀಸ್ ಸಮವಸ್ತ್ರ ತೊಡಿಸಲಾಗಿದೆ. ದೇವರ ಮೂರ್ತಿಯ ತಲೆಯ ಮೇಲೆ ಪೊಲೀಸ್ ಕ್ಯಾಪ್ ಹಾಗೂ ಎದೆ ಮೇಲೆ ಬ್ಯಾಡ್ಜ್ ನ್ನು ಹಾಕಲಾಗಿದ್ದು, ಕಾಲಭೈರವನ ಬಲಗೈಯಲ್ಲಿ ಲಾಠಿ ಸಹ ಇದೆ.
ಈ ದೇಗುಲಕ್ಕೆ ಬರುತ್ತಿರುವ ಭಕ್ತರು ಕಾಲಭೈರವ ತನ್ನ ಈ ಅವತಾರದಲ್ಲಿ ಪೊಲೀಸ್ ಆಗಿ, ತಪ್ಪು ಮಾಡಿದವರಿಗೆ ಶಿಕ್ಷೆ ನೀಡುತ್ತಾನೆ. ಬಾಬಾ ಕಾಲ ಭೈರವ ಕಾಶಿಯ ಕೊತ್ವಾಲ್ ಆಗಿದ್ದಾನೆ. ಈಗ ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದಾನೆ. ಇದರಿಂದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ನೀಡುತ್ತಾನೆ ಎಂದು ನಂಬಿದ್ದಾರೆ.
ಭಕ್ತರೆಲ್ಲರೂ ಸೇರಿ ಕೊರೊನಾ ಸೋಂಕಿನಿಂದ ದೇಶದ ಜನರನ್ನು ರಕ್ಷಿಸಲು ಕಾಲಭೈರವನಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ರಾಜ್ಯ ಮತ್ತು ದೇಶದಲ್ಲಿ ಸುಖ, ಸಮೃದ್ಧಿ ಜೊತೆಗೆ ಜನರು ಆರೋಗ್ಯವಾಗಿರಲಿ ಎಂದು ಪ್ರಾರ್ಥಿಸಲಾಗಿದೆ ಎಂದು ಇಲ್ಲಿನ ಭಕ್ತರೊಬ್ಬರು ತಿಳಿಸಿದ್ದಾರೆ.