ಪಂಜಾಬ್: ಇಲ್ಲಿನ ಫಿರೋಜ್‌ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲು ಉದ್ದೇಶಿಸಿದ್ದ ಸಾರ್ವಜನಿಕ ರ್ಯಾಲಿಗೆ ರೈತರು ಅಡ್ಡಿಪಡಿಸಿದ ಕಾರಣ ಸುಮಾರು 20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಕ್ಕಿಹಾಕಿಕೊಂಡಿದ್ದರು ಎಂಬ ಘಟನೆ ಇಡೀ ದೇಶದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಈ ಕಾರಣಕ್ಕಾಗಿ ಪಂಜಾಬ್ ನ ಫಿರೋಜ್ ಪುರ್ ನಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ರ್ಯಾಲಿಯನ್ನು ಮೋದಿಯವರು ಮೊಟಕುಗೊಳಿಸಿದರು.
ಜ.5 ರಂದು ನಡೆದ ಈ ಘಟನೆಯನ್ನು ಪಂಜಾಬ್ ಸರ್ಕಾರದ ಭದ್ರತಾ ವೈಫಲ್ಯ ಎಂದು ಬಿಜೆಪಿ ಆರೋಪಿಸಿದೆ. ಇನ್ನೊಂದೆಡೆ ಯಾವುದೇ ಭದ್ರತಾ ಲೋಪ ಜರುಗಿಲ್ಲ, ಪ್ರಧಾನಿಯವರ ಜೀವಕ್ಕೆ ಅಪಾಯವಿಲ್ಲ, ರ್ಯಾಲಿಗೆ ಜನ ಸೇರದ ಕಾರಣ ಮೋದಿಯವರು ತಮ್ಮ ಕಾರ್ಯಕ್ರಮ ರದ್ದುಗೊಳಿಸಿದ್ದಾರೆ ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.
ಈ ನಡುವೆ ಪ್ರಧಾನಿಯವರನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು ಎಂಬ ಸುದ್ದಿಯೊಂದನ್ನು ಕನ್ನಡದ ಪೇಜ್ ಒಂದು ಹರಿಬಿಟ್ಟಿದೆ. ವೈರಲ್ ಆಗಿರುವ ಫೋಟೋದೊಂದಿಗೆ ಈ ರೀತಿಯ ಸಾಲುಗಳನ್ನು ಬರೆಯಲಾಗಿದೆ. “ಈ ನೀಲಿ ಗೆರೆಯಲ್ಲಿ ನಿಂತಿರುವ ಗಾಡಿ ಮತ್ತು ಎಸ್‌ಪಿಜಿ ಸಿಬ್ಬಂದಿಯು ಅಸಾಲ್ಟ್ 2000 ನೊಂದಿಗೆ ಬರದಿದ್ದರೆ, ಆ ಕೆಂಪು ಚಿನ್ನೆಯಿಂದ ತೋರಿಸಲಾಗಿರುವ ಲಾರಿ ಪ್ರಧಾನಮಂತ್ರಿ ಕಾರನ್ನು ಗುದ್ದಿಕೊಂಡು ಹೋಗಿರುತ್ತಿತ್ತು. ಒಂದು ಸಾಮಾನ್ಯವಾಗಿ ಕ್ಲಿಯರ್ ಮಾಡಿದ ರಸ್ತೆಯಲ್ಲಿ ಒಬ್ಬ ಮನುಷ್ಯ ಕೂಡ ಹೋಗಲು ಸಾಧ್ಯವಿಲ್ಲ ಅಂಥದರಲ್ಲಿ ಪ್ರಧಾನಮಂತ್ರಿ ಬರುವ ರಸ್ತೆಯಲ್ಲಿ ಈ ಲಾರಿ ಬಂದಿರೋದು ಕಾಕತಾಳೀಯವಲ್ಲ ಇದು ಕಾಂಗ್ರೆಸ್ ನ ಕೈವಾಡ” ಎಂದು ಹೇಳಿಕೆಯೊಂದಿಗೆ ಇರುವ ಫೋಟೋಗಳು ವೈರಲ್ ಆಗುತ್ತಿವೆ. ಈ ಫೋಸ್ಟ್ ಹಲವು ಭಾರಿ ಫೇಸ್‌ಬುಕ್‌ನಲ್ಲಿ ಶೇರ್ ಆಗಿದ್ದು ನೈಜ ಸತ್ಯ ಇಲ್ಲಿದೆ ನೋಡಿ…
ವಾಸ್ತವವೇನು?
ದೇಶದ ಪ್ರಧಾನಿ ಒಂದು ರಾಜ್ಯಕ್ಕೆ ಪ್ರವಾಸ ಮಾಡುತ್ತಿದ್ದಾರೆ ಎಂದರೆ ಅವರು ಆ ರಾಜ್ಯದ ಪ್ರೋಟೋಕಾಲ್ ಪ್ರಕಾರ ನಡೆದುಕೊಳ್ಳಬೇಕು. ಆದರೆ ಆ ದಿನ ಪ್ರಧಾನ ಮಂತ್ರಿಗಳ ಶಿಷ್ಟಾಚಾರದಲ್ಲಿ ಗೊಂದಲಗಳು ಎದ್ದಿದ್ದು ಈ ವಿಚಾರವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಅದಕ್ಕಾಗಿ ಸಮಿತಿಯೊಂದನ್ನು ರಚಿಸಿದೆ.
ಹೆಲಿಕಾಪ್ಟರ್‌ನಲ್ಲಿ ತೆರಳಬೇಕಾಗಿದ್ದ ಪ್ರಧಾನಿಗಳು ಹವಾಮಾನ ವೈಪರಿತ್ಯದ ಕಾರಣ ಕೊನೆ ಕ್ಷಣದಲ್ಲಿ ರಸ್ತೆ ಮೂಲಕ ಪ್ರಯಾಣ ಬೆಳೆಸಿದ್ದಾರೆ. ಆದರೆ ಮಾಹಿತಿ ಅಡಚಣೆಯಿಂದಾಗಿ ಕ್ಲಿಯರ್ ಇಲ್ಲದ ರಸ್ತೆಯಲ್ಲಿ ಪ್ರಧಾನಿಯವರ ಬೆಂಗಾವಲು ವಾಹನ ತೆರಳಿದೆ. ಆ ರಸ್ತೆಯಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಕಾರಣ ಫ್ಲೈ ಓವರ್ ಮೇಲೆ ಪ್ರಧಾನಿಗಳು ನಿಲ್ಲಬೇಕಾಗಿದೆ. ಅದರ ಪಕ್ಕದಲ್ಲಿಯೇ ಕೆಲವರು ಬಿಜೆಪಿ ಬಾವುಟ ಹಿಡಿದು ಬಿಜೆಪಿ ಜಿಂದಾಬಾದ್, ಮೋದಿ ಜಿಂದಾಬಾದ್ ಎಂದು ಘೋಷಣೆ ಕೂಗುವ ವಿಡಿಯೋಗಳು ವೈರಲ್ ಆಗಿವೆ. ನಂತರ ಮೋದಿಯವರು ಕಾರ್ಯಕ್ರಮ ರದ್ದುಗೊಳಿಸಿ ವಾಪಸ್ ತೆರಳಿದ್ದಾರೆ.
ಇಲ್ಲಿ ರಸ್ತೆ ಕ್ಲಿಯರ್ ಇಲ್ಲದಿದ್ದರೂ ಕ್ಲಿಯರ್ ಎಂದು ಮಾಹಿತಿ ಕೊಟ್ಟವರು ಯಾರು? ಎಂಬ ವಿಚಾರದ ಕುರಿತು, ಪ್ರಧಾನಿಯವರ ಪ್ರಯಾಣದ ವಿವರಗಳು ಕುರಿತು ಸುಪ್ರೀಂ ಕೋರ್ಟ್ ತನಿಖೆ ನಡೆಸುತ್ತಿದೆ. ಇನ್ನೊಂದೆಡೆ ಫ್ಲೈ ಓವರ್ ಮೇಲೆ ಪ್ರತಿಭಟನೆ ನಡೆಸಿದವರು ಬಿಜೆಪಿ ಬೆಂಬಲಿಗರು ಎಂದು ಆರೋಪಿಸಿ 20ಕ್ಕೂ ಹೆಚ್ಚು ಜನರನ್ನು ಪಂಜಾಬ್ ಸರ್ಕಾರ ಬಂಧಿಸಿದೆ.
ಎಲ್ಲಕ್ಕಿಂತ ಮುಖ್ಯವಾಗಿ ವೈರಲ್ ಆಗಿರುವ ಫೋಸ್ಟ್ ನಲ್ಲಿ ಹೇಳಿರುವಂತೆ ಫ್ಲೈ ಓವರ್ ಮೇಲೆ ಯಾವ ಲಾರಿಯೂ ನಿಂತಿರಲಿಲ್ಲ. ಅಲ್ಲಿದ್ದುದ್ದು ಮಿನಿ ಬಸ್ ಆಗಿದೆ. ಅಲ್ಲದೆ ಆ ಬಸ್‌ನಿಂದ ಗುದ್ದಲಾಗುತ್ತಿತ್ತು ಎಂದು ಯಾವ ಪ್ರಮುಖ ಮಾಧ್ಯಮಗಳು ಸಹ ವರದಿ ಮಾಡಿಲ್ಲ. ಹಾಗಾಗಿ ಕಿಡಿಗೇಡಿಗಳು ದೂರದ ಫೋಟೊವನ್ನು ಲಾರಿ ಎಂದು ಸುಳ್ಳು ಹಬ್ಬಿಸಿ ಪ್ರಧಾನಿಗಳನ್ನು ಗುದ್ದಿ ಸಾಯಿಸಲು ಪ್ಲಾನ್ ನಡೆದಿತ್ತು ಎಂಬ ಕಪೋಲಕಲ್ಪಿತ ಸುಳ್ಳು ಸುದ್ದಿ ಹರಡಿದ್ದಾರೆ.
ಕೆಲವು ಬಲಪಂಥೀಯ ಫೇಸ್ ಬುಕ್ ಪೇಜಿನಲ್ಲಿ ಇದೇ ರೀತಿಯ ಹಲವು ಸುಳ್ಳು ಸುದ್ದಿಗಳು ಹಂಚಿಕೆಯಾಗುತ್ತಿರುತ್ತವೆ. ನೀವು ಯಥಾವತ್ತಾಗಿ ನಂಬುವ ಮುನ್ನ ಪರಿಶೀಲಿಸುವುದು ಒಳಿತು.