ಬೆಂಗಳೂರು: ಸಚಿವ ಎಸ್.ಟಿ.ಸೋಮಶೇಖರ್ ಅವರ ಪುತ್ರ ನಿಶಾಂತ್ ಗೆ ನಕಲಿ ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿರುವ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಸಚಿವರ ಪುತ್ರ ನಿಶಾಂತ್ ಆಡುಗೋಡಿಯಲ್ಲಿರುವ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ಅಪರಿಚಿತರ ವಿರುದ್ಧ ದೂರು ದಾಖಲಿಸಿದ್ದಾರೆ.
ನಾನು ರಾಜಕೀಯವಾಗಿ ಬಿಜೆಪಿ ಪಕ್ಷದಿಂದ ಗುರುತಿಸಿಕೊಂಡಿದ್ದೇನೆ. ಪಕ್ಷ ಸಂಘಟನೆಯಲ್ಲಿ ಕೆಲಸವನ್ನು ಮಾಡುತ್ತಾ ಬಂದಿರುತ್ತೇನೆ. ನನ್ನ ಮತ್ತು ನನ್ನ ತಂದೆ ರಾಜಕೀಯ ಬೆಳವಣಿಗೆ ಸಹಿಸದೆ ಕೃತ್ಯ ಮಾಡಲಾಗಿದೆ. ಈ ಮೂಲಕ ನಮ್ಮ ಹೆಸರಿಗೆ ಚ್ಯುತಿ ತರಲು ಹುನ್ನಾರ ಮಾಡಲಾಗುತ್ತಿದೆ. ರಾಜಕೀಯವಾಗಿ ನಮ್ಮನ್ನು ಮುಗಿಸಬೇಕೆಂಬ ದುರುದ್ದೇಶದಿಂದ ಕೆಲ ದುಷ್ಕರ್ಮಿಗಳ ಸಂಚು ರೂಪಿಸಿದ್ದಾರೆ. ನನ್ನನ್ನ ನೇರವಾಗಿ ಟಾರ್ಗೆಟ್ ಮಾಡಿ ನಕಲಿ ವಿಡಿಯೋ ಮಾಡಲಾಗಿದೆ. ಯಾರೋ ಮಹಿಳೆಯ ಜೊತೆಯಲ್ಲಿರುವಂತೆ ಆಶ್ಲೀಲವಾದ ನಕಲಿ ದೃಶ್ಯಾವಳಿ ಮತ್ತು ಫೋಟೋ ಸೃಷ್ಟಿಸಿ ನನಗೆ ಕಳುಹಿಸಲಾಗಿದೆ ಎಂದು ನಿಶಾಂತ್ ದೂರಿನಲ್ಲಿ ನಿಶಾಂತ್ ಉಲ್ಲೇಖಿಸಿದ್ದಾರೆ.
ಮೆಸೇಜ್ ಕಳುಹಿಸಿ ಹಣಕ್ಕಾಗಿ ಬೇಡಿಕೆ
ಡಿ.25ರಂದು ವಿಡಿಯೋ & ಫೋಟೋಗಳನ್ನು ನನ್ನ ತಂದೆಯ ಪಿಎ ಶೀನಿವಾಸಗೌಡ ಮತ್ತು ಭಾನುಪ್ರಕಾಶ್ ಗೆ ಕಳಿಸಿದ್ದಾರೆ. ವಾಟ್ಸಾಪ್ ಮೂಲಕ ಪದೇ ಪದೇ ಮೇಸೆಜ್ ಗಳನ್ನು ಕಳುಹಿಸಿ ಬ್ಲಾಕ್ ಮೇಲ್ ಮಾಡಲಾಗುತ್ತಿದೆ. ತಾವು ಕೇಳಿದಷ್ಟು ಹಣವನ್ನು ಕೊಡಬೇಕೆಂದು ಬೇಡಿಕೆ ಇರಿಸಲಾಗಿದೆ.
ರಾಜಕೀಯ ಭವಿಷ್ಯವನ್ನು ಮುಗಿಸುವುದಾಗಿ ಬೆದರಿಕೆ
ಹಣವನ್ನು ನೀಡದಿದ್ದಲ್ಲಿ ಆಶ್ಲೀಲ ವಿಡಿಯೋ ಫೋಟೋ ಬಹಿರಂಗ ಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಸಾಮಾಜಿಕ ಜಾಲದಲ್ಲಿ ಮತ್ತು ಮಾಧ್ಯಮಗಳಿಗೆ ಹರಿದುಬಿಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ನನ್ನ ಹಾಗೂ ನಮ್ಮ ತಂದೆಯ ರಾಜಕೀಯ ಭವಿಷ್ಯವನ್ನು ಮುಗಿಸುವುದಾಗಿ ಹೇಳುತ್ತಿದ್ದಾರೆ. ಸಂಚಿನ ಹಿಂದೆ ತುಂಬಾ ಪ್ರಭಾವಶಾಲಿ ವ್ಯಕ್ತಿಗಳು ಭಾಗಿಯಾಗಿರುವ ಸಾಧ್ಯತೆ ಇದೆ. ಕೆಲ ದುಷ್ಕರ್ಮಿಗಳು, ನಮಗೆ ತೊಂದರೆ ನೀಡಬೇಕೆಂಬ ದುರುದ್ದೇಶದಿಂದ ಈ ರೀತಿ ಸಂಚು ರೂಪಿಸಿದ್ದಾರೆ. ಆ ಆಸಾಮಿಗಳ ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನಿಶಾಂತ್ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಮಾಹಿತಿ ಬಿಟ್ಟು ಕೊಡದ ಪೊಲೀಸರು
ನಿಶಾಂತ್ ದೂರು ನೀಡಿದ ದೂರಿನಲ್ಲಿ ತಮಗೆ ವಾಟ್ಸಪ್ ಮಾಡುತ್ತಿರುವ ಮೊಬೈಲ್ ಸಂಖ್ಯೆಯನ್ನು ಸಹ ಪೊಲೀಸರಿಗೆ ನೀಡಿದ್ದಾರೆ. ಈ ಸಂಬಂಧ ಸಚಿವ ಸೋಮಶೇಖರ್ ಮತ್ತು ನಿಶಾಂತ್ ಮಾಧ್ಯಮಗಳಿಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಮಾಧ್ಯಗಳಿಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದಾರೆ.
ಜ್ಯೋತಿಷಿ ಪುತ್ರನ ಸಂಚು ಇದೆಯಾ?
ಸಚಿವ ಎಸ್ ಟಿ ಸೋಮಶೇಖರ್ ಪುತ್ರ ನಿಶಾಂತ್ ಗೆ ಬ್ಲಾಕ್ ಮೇಲ್ ಮಾಡಿದ್ದವನನ್ನು ಪೊಲೀಸರು ಅರೆಸ್ಟ್ ಮಾಡಿರುವ ಮಾಹಿತಿ ಲಭ್ಯವಾಗಿದೆ. ಖ್ಯಾತ ಜ್ಯೋತಿಷಿ ಆರ್ ಟಿ ನಗರದ ಚಂದ್ರಶೇಖರ್ ಅವರ ಪುತ್ರ ರಾಹುಲ್ ಭಟ್ (22) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
5 ದಿನ ಪೊಲೀಸ್ ಕಸ್ಟಡಿಗೆ
ಸದ್ಯ ಬಂಧಿತನನ್ನ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುತ್ತಿದ್ದು, ಹೆಚ್ಚಿನ ವಿಚಾರಣೆಗೆ ಪೊಲೀಸರು ಐದು ದಿನ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಂಡಿದ್ದರು. ಸದ್ಯ ನ್ಯಾಯಾಲಯ ಆರೋಪಿ ರಾಹುಲ್ ಭಟ್ ನನ್ನು 5 ದಿನ ಪೊಲೀಸರ ವಶಕ್ಕೆ ನೀಡಿದೆ. ಈ ವಿಡಿಯೋ ಗ್ಯಾಂಗ್ ಹಿಂದೆ ಯಾರೆಲ್ಲ ಇದ್ದಾರೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.