ಹಾಸನ: ಬೆಂಗಳೂರು ಮತ್ತು ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75 ಮತ್ತೆ ಬಂದ್ ಆಗುವ ಸಾಧ್ಯತೆ ಇದೆ.
ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪತ್ರ ಬರೆದಿದ್ದು, ಸಂಕ್ರಾಂತಿ ಬಳಿಕ ಮತ್ತೆ ಆರು ತಿಂಗಳು ಶಿರಾಡಿ ಘಾಟ್ನಲ್ಲಿ ನಾಲ್ಕು ಪಥದ ರಸ್ತೆ ನಿರ್ಮಾಣ ಕಾಮಗಾರಿಗಾಗಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಬಗ್ಗೆ ಮನವಿ ಮಾಡಲಾಗಿದೆ. ಹೀಗಾಗಿ ವಾಹನ ಸವಾರರಿಗೆ ಮತ್ತೆ ಸಂಕಷ್ಟ ಎದುರಾಗಲಿದೆ.
ಹಾಸನದ ಮೂಲಕ ಹಾದು ಹೋಗುವ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ನಲ್ಲಿ ಸಾಕಷ್ಟು ಕಡಿದಾದ ತಿರುವುಗಳನ್ನು ಹೊಂದಿರುವ ರಸ್ತೆ. ಬೆಂಗಳೂರಿನಿಂದ ಹಾಸನದ ವರೆಗೆ ನಾಲ್ಕು ಪಥದ ರಸ್ತೆ ಇದೆ. ಹಾಸನದಿಂದ ಸಕಲೇಶಪುರಕ್ಕೆ ಫೋರ್ ವೇ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ರಾಜಕಮಲ್ ಸಂಸ್ಥೆ ಈ ಕಾಮಗಾರಿ ನಡೆಸುತ್ತಿದ್ದು, ಇದರಲ್ಲಿ ಸಕಲೇಶಪುರ ಹೊರವಲಯದ ದೋಣಿಗಲ್ ಬಳಿಯ 220 ಕಿಲೋಮೀಟರ್ ರಿಂದ 230ರ ವರೆಗಿನ ಮಾರನಹಳ್ಳಿವರೆಗೆ ಕಾಮಗಾರಿ ನಡೆಸಲು ಆರು ತಿಂಗಳು ರಸ್ತೆ ಬಂದ್ ಮಾಡಿ ಎಂದು ಪತ್ರ ಬರೆದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹಾಸನ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.
ವಾಹನ ಸಂಚಾರದ ಜೊತೆಗೆ ಕಾಮಗಾರಿ ಮಾಡಲು ಆಗಲ್ಲ. ದೊಡ್ಡ ದೊಡ್ಡ ಯಂತ್ರಗಳು ಇಲ್ಲಿಗೆ ಬರಬೇಕಿದೆ. ಹೆಚ್ಚಿನ ಪ್ರಮಾಣದ ಸಾಮಗ್ರಿಗಳನ್ನ ತಂದು ಸಂಗ್ರಹ ಮಾಡಬೇಕಿದೆ. ಇಲ್ಲಿ ಕಡಿದಾದ ತಿರುವುಗಳು, ದೊಡ್ಡ ದೊಡ್ಡ ತಡೆಗೋಡೆಗಳ ನಿರ್ಮಾಣ ಆಗಬೇಕಿದೆ. ಹಾಗಾಗಿ ಈ ಮಾರ್ಗದ ರಸ್ತೆ ನಿರ್ಮಾಣಕ್ಕಾಗಿ ಆರು ತಿಂಗಳು ರಸ್ತೆ ಸಂಚಾರ ಬಂದ್ ಮಾಡಿ ಎಂದು ಮನವಿ ಮಾಡಲಾಗಿದೆ. ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ರಾಜಕಮಲ್ ಸಂಸ್ಥೆಯ ಮನವಿ ಆಧರಿಸಿ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಎನ್‌ಎಚ್‌ಎ ಅಧಿಕಾರಿಗಳು ಶೀಘ್ರವಾಗಿ ಈ ಬಗ್ಗೆ ಪರಿಶೀಲನೆಗೆ ಮನವಿ ಮಾಡಿದ್ದಾರೆ.