ಬೆಂಗಳೂರು: ಹಿರಿಯ ಸಾಹಿತಿ, ನಾಟಕಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೋಟಣನಕುಂಟೆ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪಾರ್ಥೀವ ಶರೀರವನ್ನು ಯಲಚೇನಹಳ್ಳಿ ಸಮೀಪದ ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಚಂಪಾ ಅವರಿಗೆ 85 ವರ್ಷ ವಯಸ್ಸಾಗಿತ್ತು.
ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಚಂಪಾ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಪರಿಷತ್ತಿನ ಮೂಲಗಳು ತಿಳಿಸಿವೆ.
ಕನ್ನಡದ ಕವಿ, ನಾಟಕಕಾರ, ಹೋರಾಟಗಾರರಾದ ಚಂದ್ರಶೇಖರ ಪಾಟೀಲ ಅವರು ‘ಚಂಪಾ’ ಎಂದೇ ಪ್ರಖ್ಯಾತರಾಗಿದ್ದರು. 1939ರಲ್ಲಿ ಅವರು ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನಲ್ಲಿ ಜನಿಸಿದ್ದರು. ಹತ್ತಿಮತ್ತೂರು- ಹಾವೇರಿ ಶಾಲೆ-ಹೈಸ್ಕೂಲ್ ಮುಗಿಸಿ 1956ರಲ್ಲಿ ಕರ್ನಾಟಕ ಕಾಲೇಜಿಗೆ ಸೇರಿದರು. 1960ರಲ್ಲಿ ಬಿಎ ಪೂರೈಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ 1962ರಲ್ಲಿ ಎಂ.ಎ. ಮುಗಿಸಿದರು. 1969ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾದರು. 1980-82ರಲ್ಲಿ ಧಾರವಾಡದ ಅಖಿಲ ಕರ್ನಾಟಕ ಕೇಂದ್ರ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಗೋಕಾಕ್ ಚಳವಳಿಗೆ ಪ್ರೇರಣಿ ನೀಡಿದ ಪ್ರಮುಖರಲ್ಲಿ ಚಂಪಾ ಒಬ್ಬರಾಗಿದ್ದರು.