ಕಾಸರಗೋಡು: ಸಮುದ್ರಕ್ಕೆ ಬಿದ್ದು ಸುದೀರ್ಘ 30 ಗಂಟೆಗಳ ಕಾಲ ಈಜಾಡಿ ಸಾವನ್ನು ಗೆದ್ದುಬಂದ ಮೀನುಗಾರರೋರ್ವರು ಅಚ್ಚರಿ ಸೃಷ್ಟಿಸಿದ ಘಟನೆ ವರದಿಯಾಗಿದೆ.
ಮೀನುಗಾರನನ್ನು ತಮಿಳುನಾಡು ಮೂಲದ ಜೋಸೆಫ್ ಎಂದು ಗುರುತಿಸಲಾಗಿದೆ.
ಇವರು ಡಿ. 31ರಂದು ಮಂಗಳೂರಿನಿಂದ ಮೀನುಗಾರಿಕಾ ದೋಣಿಯೊಂದರಲ್ಲಿ ಎಂಟು ಮಂದಿಯ ತಂಡದೊಂದಿಗೆ ತೆರಳಿದ್ದರು. ಜ. 6ರಂದು ಮುಂಜಾನೆ ಎರಡು ಗಂಟೆಯ ಸುಮಾರಿಗೆ ದೋಣಿಯಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದ ಜೋಸೆಫ್ ನಾಪತ್ತೆಯಾಗಿದ್ದರು.
ಆಗ ದೋಣಿ ಸಮುದ್ರ ದಡದಿಂದ ಸುಮಾರು 36 ನಾಟಿಕಲ್ ಮೈಲ್ ದೂರದಲ್ಲಿದ್ದು, ಬೆಳಗ್ಗೆ 11 ಗಂಟೆಯವರೆಗೆ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆ ದೋಣಿಯ ಮಾಲಕರಿಗೆ ಮಾಹಿತಿ ನೀಡಿದ್ದು, ಬಳಿಕ ಕರಾವಳಿ ಕಾವಲು ಪೊಲೀಸರಿಗೆ ಮತ್ತು ಪಾಂಡೇಶ್ವರ ಠಾಣೆಗೆ ಮಾಹಿತಿ ನೀಡಿ ಹುಡುಕಾಟಕ್ಕಾಗಿ ಸಹಾಯ ಯಾಚಿಸಿದ್ದರು. ಈ ನಡುವೆ ಜ. 7ರಂದು ಮೀನುಗಾರಿಕೆ ತೆರಳಿದ್ದ ಕಾಸರಗೋಡು ಕೀಯೂರು ಕಡಪ್ಪುರದ ದಿನೇಶ್, ಸುರೇಶ್ ಎಂಬವರು ತಮ್ಮ ದೋಣಿಯಲ್ಲಿ ಸಾಗುತ್ತಿದ್ದ ವೇಳೆ ಸಮುದ್ರದಲ್ಲಿ ವ್ಯಕ್ತಿಯೋರ್ವರನ್ನು ಕಂಡು, ಕೂಡಲೇ ದಡಕ್ಕೆ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ನಾಪತ್ತೆಯಾದ ಜೋಸೆಫ್ ಇವರೇ ಎಂದು ತಿಳಿದುಬಂದಿದೆ.