ಮಂಗಳೂರು: ಪ್ರತಿದಿನ 80 ಮಂದಿ ರೋಗಿಗಳಿಗೆ ಡಯಾಲಿಸಿಸ್ ಸೌಲಭ್ಯ ಒದಗಿಸುವ ಮೂಲಕ ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯು ರಾಜ್ಯದಲ್ಲಿಯೇ ಮೊದಲ ಸ್ಥಾನದ ಹೆಗ್ಗಳಿಕೆಗೆ ಪಾತ್ರವಾಗಿದೆ.
ದಿನವೊಂದಕ್ಕೆ 60 ಮಂದಿಗೆ ಡಯಾಲಿಸಿಸ್ ಸೌಲಭ್ಯ ನೀಡುವ ಮೂಲಕ ಎರಡನೇ ಸ್ಥಾನದಲ್ಲಿದ್ದ ಸರ್ಕಾರಿ ಆಸ್ಪತ್ರೆಯು ಈಗ ಇನ್ನಷ್ಟು ರೋಗಿಗಳಿಗೆ ಸೇವೆ ಒದಗಿಸಲು ಸಿದ್ಧವಾಗಿದೆ.
ಪ್ರತಿನಿತ್ಯ 68 ಮಂದಿ ರೋಗಿಗಳಿಗೆ ಡಯಾಲಿಸಿಸ್ ಸೌಲಭ್ಯ ನೀಡುತ್ತಿದ್ದ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯು ಈವರೆಗೆ ಮೊದಲ ಸ್ಥಾನದಲ್ಲಿತ್ತು, ಅದು ಈಗ ಎರಡನೇ ಸ್ಥಾನದಲ್ಲಿದೆ.
ಮೂತ್ರ ಪಿಂಡದ ಸಮಸ್ಯೆ ಹೊಂದಿರುವ ಬಡ ರೋಗಿಗಗಳು, ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚದ ಡಯಾಲಿಸಿಸ್ ಚಿಕಿತ್ಸೆ ಪಡೆಯಲು ಪರದಾಡುವಂತಹ ಇಂತಹ ಸ್ಥಿತಿ ಇತ್ತು. ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೌಲಭ್ಯ ಸಿಗುತ್ತಿರುವುದರಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ತಿಂಗಳಿಗೆ 1,800 ಮಂದಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ.
ಕೆಲವು ರೋಗಿಗಳಿಗೆ ವಾರಕ್ಕೆ 2ರಿಂದ 3ಬಾರಿ ಡಯಾಲಿಸಿಸ್ ಮಾಡುವ ಅಗತ್ಯವಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ತಿಂಗಳೊಂದಕ್ಕೆ ₹4 ಸಾವಿರದಿಂದ ₹6 ಸಾವಿರದವರೆಗೆ ಹಣಖರ್ಚು ಮಾಡಬೇಕಾಗುತ್ತದೆ.
ವೆನ್ಲಾಕ್‌ನಲ್ಲಿ ಇಡೀ ಸೇವೆ ಉಚಿತವಾಗಿ ಲಭಿಸುತ್ತಿದೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ, ಡಯಾಲಿಸಿಸ್ ಅಗತ್ಯವಿರುವ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಷ್ಟೇ ಅಲ್ಲ, ಇತರ ವರ್ಗದ ರೋಗಿಗಳಿಗೂ ಉಚಿತವಾಗಿ ಈ ಸೌಲಭ್ಯ ನೀಡಲಾಗುತ್ತದೆ.