ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ದುಪ್ಪಟ್ಟಾಗುತ್ತಿದೆ. ಇದರಿಂದ ಮತ್ತೆ ಕರ್ನಾಟಕದಲ್ಲಿ ಕೊರೊನಾ ಆತಂಕ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರ ಕೆಲವು ದಿನಗಳ ಹಿಂದೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಇದರಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸೇರಿದಂತೆ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಸೀಟು ಭರ್ತಿ ಯಂತಹ ಕಠಿಣ ಮಾರ್ಗಸೂಚಿಯನ್ನೂ ಹೊರಡಿಸಿದೆ.
ಈ ನಿಯಮಗಳು ಕನ್ನಡ ಚಿತ್ರರಂಗಕ್ಕೆ ಮಾರಕ ಎಂದು ಫಿಲ್ಮ್ ಚೇಂಬರ್ ಆತಂಕ ವ್ಯಕ್ತಪಡಿಸಿದೆ.
ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡುತ್ತಿದ್ದಂತೆ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ತುರ್ತು ಸಭೆಯನ್ನು ನಡೆಸಿದೆ. ಈ ಸಭೆಯಲ್ಲಿ ಸದಸ್ಯರು ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಸರ್ಕಾರಕ್ಕೆ ವೀಕೆಂಡ್ ಕರ್ಪ್ಯೂ ಜಾರಿಯಿಂದ ಕನ್ನಡದ ಚಿತ್ರರಂಗದ ಮೇಲಾಗುತ್ತಿರುವ ಪರಿಣಾಮವನ್ನು ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ. ಹೀಗಾಗಿ ಇಂದು (ಜನವರಿ 7) ಸಿ ಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.
ಡಿಸೆಂಬರ್ 24 ರಿಂದ 5 ಸಿನಿಮಾಗಳು ಬಿಡುಗೆಡೆಯಾಗಿವೆ. ಈ ಸಿನಿಮಾಗಳು ವೀಕೆಂಡ್ ಕರ್ಫ್ಯೂನಿಂದ ನಷ್ಟ ಅನುಭವಿಸುವುದು ಖಚಿತ. ಹೀಗಾಗಿ ಸಿಎಂ ಬಳಿ ಈ ಐದು ಸಿನಿಮಾಗಳ ಬಗ್ಗೆನೂ ಚರ್ಚೆ ಮಾಡಲಿದ್ದಾರೆ. ” ಕಳೆದ ಎರಡು ವಾರಗಳಲ್ಲಿ5 ಸಿನಿಮಾಗಳು ಬಿಡುಗಡೆಯಾಗಿವೆ. ಧನಂಜಯ್ ನಟನೆಯ ‘ಬಡವ ರಾಸ್ಕಲ್’ ಸಿನಿಮಾ ಉತ್ತಮ ಗಳಿಕೆ ಕಾಣುತ್ತಿದೆ. ನಿಖಿಲ್ ಕುಮಾರ್ ‘ರೈಡರ್’, ‘ಲವ್ ಯು ರಚ್ಚು’, ‘ಅರ್ಜುನ್ ಗೌಡ’ ಹಾಗೂ ‘ಹುಟ್ಟುಹಬ್ಬದ ಶುಭಾಶಯಗಳು’ ಬಿಡುಗಡೆಯಾಗಿವೆ. ಈ ಸಿನಿಮಾಗಳಿಗೆ ವೀಕೆಂಡ್ ಕರ್ಫ್ಯೂ ಜಾರಿಯಾಗಿದ್ದರಿಂದ ನಷ್ಟ ಆಗಲಿದೆ. ಹೀಗಾಗಿ ಈ ಐದು ಸಿನಿಮಾಗಳಿಗೆ ಸರ್ಕಾರದಿಂದ ಏನಾದರೂ ಪರಿಹಾರ ಘೋಷಣೆ ಮಾಡಬಹುದೇ ಎಂದು ಸಿಎಂ ಬಳಿ ಮನವಿ ಮಾಡಿಕೊಳ್ಳುತ್ತೇವೆ.” ಎಂದು ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಎನ್ ಎಂ ಸುರೇಶ್ ಫಿಲ್ಮಿ ಬೀಟ್‌ಗೆ ತಿಳಿಸಿದ್ದಾರೆ.