ಮಂಗಳೂರು: ಪಂಜಾಬ್‌ನ ಮೇಲ್ಸೇತುವೆ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಕಾರನ್ನು ಇಪ್ಪತ್ತು ನಿಮಿಷ ತಡೆ ಹಿಡಿದ ವಿಚಾರ ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪ್ರಧಾನಿಯವರನ್ನು ಈ ರೀತಿ ಅಡ್ಡಗಟ್ಟಿಸಿರುವುದು ಭದ್ರತಾ ವೈಫಲ್ಯ ಅಂತಾ ಆಡಳಿತ ಪಕ್ಷ ಟೀಕಿಸಿದರೆ, ಕಾಂಗ್ರೆಸ್ ಮಾತ್ರ ಇದು ಚುನಾವಣಾ ಗಿಮಿಕ್, ಮೋದಿ, ಮೆರವಣಿಗೆಯಲ್ಲಿ ಜನ ಸೇರಲಿಲ್ಲ ಎಂಬ ಕಾರಣಕ್ಕಾಗಿ ಮೋದಿ ಈ ಹೈಡ್ರಾಮ ಮಾಡಿದ್ದಾರೆ ಅಂತಾ ಕಾಂಗ್ರೆಸ್ ಟೀಕಿಸಿದೆ.
ನರೇಂದ್ರ ಮೋದಿಯವರ ವಾಹನ ಮೇಲ್ಸೇತುವೆ ಮೇಲೆ ಇಪ್ಪತ್ತು ನಿಮಿಷ ಬಾಕಿಯಾಗುತ್ತಿದ್ದಂತೆಯೇ ಪ್ರಧಾನಿ ಮೋದಿಗೆ ಜೀವಕ್ಕೆ ಕಟಂಕದ ಬಗ್ಗೆ ಬಿಜೆಪಿ ಕಾರ್ಯಕರ್ತರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನಲೆಯಲ್ಲಿ ಮೋದಿಯವರ ಜೀವಕ್ಕೆ ಹಾನಿಯಾಗದಂತೆ ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ನರೇಂದ್ರ ಮೋದಿಯವರ ದೀರ್ಘಾಯಸ್ಸು ಮತ್ತು ಆರೋಗ್ಯಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಹಾ ಮೃತ್ಯುಂಜಯ ಹೋಮ ನಡೆಸಲು ತೀರ್ಮಾನಿಸಲಾಗಿದೆ.
ಜನವರಿ 17ರ ಸೋಮವಾರದಂದು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥನ ಸನ್ನಿಧಾನದಲ್ಲಿ ಮೋದಿಯ ದೀರ್ಘಾಯಸ್ಸಿಗಾಗಿ ಮಹಾ ಮೃತ್ಯುಂಜಯ ನಡೆಸಲು ಹರೀಶ್ ಪೂಂಜಾ ತೀರ್ಮಾನಿಸಿದ್ದಾರೆ. ಈ ಹೋಮ ಬೆಳ್ತಂಗಡಿ ತಾಲೂಕಿನ ಜನರ ಪರವಾಗಿ ಮಾಡಲು ತೀರ್ಮಾನಿಸಿದ್ದು, ಈ ಬಗ್ಗೆ ಪೂರ್ವಭಾವಿ ಸಭೆ ಕರೆದು ತೀರ್ಮಾನಿಸಲಾಗಿದೆ.
ನರೇಂದ್ರ ಮೋದಿಗಾಗಿ ಈ ಮಹಾ ಮೃತ್ಯುಂಜಯ ಹೋಮ ನಡೆಸಲಾಗುತ್ತಿದ್ದು, ವೈದಿಕ ಪಂಡಿತರ ನೇತೃತ್ವದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಜನವರಿ 10ರ ಸೋಮವಾರ ಬೆಳ್ತಂಗಡಿ ತಾಲೂಕಿನ ಎಲ್ಲಾ ಶಿವ ದೇಗುಲಗಳಲ್ಲಿ ಮೃತ್ಯುಂಜಯ ಹೋಮ ನಡೆಸಲು ತೀರ್ಮಾನಿಸಲಾಗಿದೆ. ಆ ಬಳಿಕ ಶ್ರೀಕ್ಷೇತ್ರ ಧರ್ಮಸ್ಥಳ ದಲ್ಲಿ ಜನವರಿ 17ರ ಸೋಮವಾರ ಮಹಾ ಮೃತ್ಯುಂಜಯ ಹೋಮದಲ್ಲಿ ಪೂರ್ಣಾಹುತಿ ಮಾಡಲಾಗುತ್ತದೆ.
ಮೃತ್ಯುಂಜಯ ಹೋಮದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಹರೀಶ್ ಪೂಂಜಾ, “ಪ್ರಧಾನಿ ನರೇಂದ್ರ ಮೋದಿಯವರ ಪ್ರಾಣಕ್ಕೆ ಆಪತ್ತಿಗಾಗಿ ದೇಶ ದ್ರೋಹಿಗಳು ಸಂಚು ಹಾಕುತ್ತಿದ್ದಾರೆ. ಅವರ ಆರೋಗ್ಯ ಮತ್ತು ದೀರ್ಘಾಯಸ್ಸಿಗಾಗಿ ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಾನದಲ್ಲಿ ಮಹಾ ಮೃತ್ಯುಂಜಯ ಹೋಮ ಮಾಡಲಿದ್ದೇವೆ. ಈ ಕಾರ್ಯ ಸೀಮಿತ ಸಂಖ್ಯೆಯ ಜನರ ಸಮ್ಮುಖದಲ್ಲಿನಡೆಯಲಿದೆ. ಆದರೆ ಇದಕ್ಕೂ ಮುನ್ನ ತಾಲೂಕಿನ ಎಲ್ಲಾ ಶಿವ ದೇಗುಲಗಳಲ್ಲಿ ಮೃತ್ಯುಂಜಯ ಹೋಮ ನಡೆಯಲಿದ್ದು, ಈ ಕಾರ್ಯದಲ್ಲಿ ಗ್ರಾಮದ ಪ್ರಮುಖರು ಭಾಗವಹಿಸಲಿದ್ದಾರೆ,” ಎಂದು ಹೇಳಿದ್ದಾರೆ.