ಚಂಡೀಗಢ: ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಪಂಜಾಬ್‍ಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದ ವೇಳೆ ಭಾರೀ ಭದ್ರತಾ ಲೋಪವಾಗಿದೆ.
ಬಟಿಂಡಾದಲ್ಲಿ ಇಂದು ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನರೇಂದ್ರ ಮೋದಿ ಪಂಜಾಬ್‍ಗೆ ಆಗಮಿಸಿದ್ದರು. ಮಧ್ಯಾಹ್ನ ಹುಸೇನಿವಾಲಾದಲ್ಲಿ ರಾಷ್ಟ್ರೀಯ ಹುತಾತ್ಮರ ಸ್ಮಾರಕ ಸ್ಥಳಕ್ಕೆ ತೆರಳಲು ಹೋಗುತ್ತಿದ್ದಾಗ ಭದ್ರತಾ ಲೋಪವಾಗಿದೆ.
ಕಾರ್ಯಕ್ರಮಕ್ಕೆ ಕಾರಿನಲ್ಲಿ ಭದ್ರತಾ ಸಿಬ್ಬಂದಿ ಜೊತೆ ಫ್ಲೈ ಓವರ್‌ನಲ್ಲಿ ತೆರಳುತ್ತಿದ್ದಾಗ ರೈತರು ಪ್ರತಿಭಟನೆ ಮಾಡುತ್ತಿರುವುದು ಗೊತ್ತಾಗಿದೆ. ಭದ್ರತಾ ಲೋಪದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‍ನ ಫ್ಲೈಓವರ್‌ನಲ್ಲಿ ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡಿದ್ದರು. ಬಳಿಕ ಬಟಿಂಡಾಕ್ಕೆ ಮರಳಿದ್ದಾರೆ.
ಘಟನೆಯ ಬಳಿಕ ಬಟಿಂಡಾ ವಿಮಾನ ನಿಲ್ದಾಣದ ಸಿಬ್ಬಂದಿ ಜೊತೆ ಮಾತನಾಡಿದ್ದ ಮೋದಿ, ನಾನು ಜೀವಂತವಾಗಿ ಬಂದಿದ್ದೇನೆ. ನಿಮ್ಮ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಿ ಎಂದು ಪಂಜಾಬ್ ಸರ್ಕಾರಕ್ಕೆ ಮಾತಿನಲ್ಲೇ ಕುಟುಕಿದ್ದಾರೆ.
ಬಟಿಂಡಾದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ ವೇಳೆ ಮೋದಿಯ ಬೆಂಗಾವಲು ವಾಹನಕ್ಕೆ ರೈತರು ತಡೆ ಹಾಕಿದ್ದರು. ಹಾಗಾಗಿ ಮೋದಿ ಸಂಚರಿಸುತ್ತಿದ್ದ ಕಾರು ಫಿರೋಜ್ ಪುರ ಫ್ಲೈಓವರ್ ನಲ್ಲಿ ಸಿಲುಕಿಕೊಂಡಿತ್ತು.