Ad Widget .

ಕಾನೂನು ಪ್ರಾಧಿಕಾರ ಮಧ್ಯಸ್ಥಿಕೆ| ಮತ್ತೆ ಒಂದಾದ ಸತಿ-ಪತಿಗಳು|

Ad Widget . Ad Widget .

ಮಂಗಳೂರು: ಕೌಟುಂಬಿಕ ಕಲಹಗಳಿಂದಾಗಿ ಮನನೊಂದು ಬೇರ್ಪಟ್ಟಿದ್ದ ಸತಿ-ಪತಿ ಹಾಗೂ ಮಕ್ಕಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮಧ್ಯಸ್ಥಿಕೆಯಲ್ಲಿ ಒಂದಾದ ಘಟನೆ ಮಂಗಳವಾರ ನಡೆದಿದೆ.

Ad Widget . Ad Widget .

ಕೌಟುಂಬಿಕ ಜೀವನದಲ್ಲಿ ಕಂಡುಬಂದ ಹಲವಾರು ಸಮಸ್ಯೆಗಳಿಂದ ಮನನೊಂದಿದ್ದ ನಾರಾಯಣ್‌ (48) (ಹೆಸರು ಬದಲಾಯಿಸಲಾಗಿದೆ) ಮತ್ತು ಸರಳಾ (46) (ಹೆಸರು ಬದಲಾಯಿಸಲಾಗಿದೆ) ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನಡೆಸಿದ ಕೌನ್ಸೆಲಿಂಗ್‌ನಲ್ಲಿ ಸಂಸಾರದ ಜವಾಬ್ದಾರಿ, ಅದರ ಮಹತ್ವಗಳನ್ನು ಅರಿತುಕೊಂಡು ಸತಿ-ಪತಿಯ ಮನಪರಿವರ್ತನೆಯಾಗಿ ಪುನಃ ಒಂದಾಗಿದ್ದಾರೆ.

ಕೌಟುಂಬಿಕ ಕಲಹಗಳಿಂದಾಗಿ ಮನ ನೊಂದು ಬೇರೆಯಾಗಲು ನಿರ್ಧರಿಸಿದ್ದರು. ನಾರಾಯಣ್‌ ಬಿ.ಫಾರ್ಮ್ ಓದಿ ಮೆಡಿಕಲ್‌ ಶಾಪ್‌ ಹೊಂದಿದ್ದರು. ಅದರ ಪಕ್ಕದಲ್ಲೇ ಬಿಎಎಂಎಸ್‌ ಕ್ಲಿನಿಕ್‌ ನಡೆಸುತ್ತಿದ್ದ ಪತ್ನಿ ಸರಳಾ ತಾನು ದುಡಿದ ಹಣವನ್ನು ಇಬ್ಬರು ಮಕ್ಕಳ ಹೆಸರಿನಲ್ಲಿ ಫಿಕ್ಸೆಡ್‌ ಡಿಫಾಸಿಟ್‌ ಇರಿಸಿದ್ದರು. ಕೌಟುಂಬಿಕ ಜೀವನದಲ್ಲಿ ಏರ್ಪಟ್ಟ ಕೆಲವು ಘರ್ಷಣೆಗಳು ಮತ್ತು ವೈಪರೀತ್ಯಗಳಿಂದಾಗಿ ಇಬ್ಬರ ನಡುವೆ ತೀವ್ರ ಭಿನ್ನಾಭಿಪ್ರಾಯ ತಲೆದೋರಿತ್ತು.

ಮುಂದಿನ ಜೀವನ ಇಬ್ಬರು ಒಂದಾಗಿ ಸಾಗುವುದು ಕಷ್ಟವೆನಿಸಿತು. ಕಠಿನ ನಿರ್ಧಾರ ಕೈಗೊಂಡ ಅವರಿಬ್ಬರು ದೂರವಾದರು. ಸರಳಾ ಪ್ರತ್ಯೇಕವಾಗಿ ಉಡುಪಿ ಜಿಲ್ಲೆಯ ಸಿದ್ಧಾಪುರದಲ್ಲಿ ಮಕ್ಕಳೊಂದಿಗೆ ವಾಸವಿದ್ದರು. ಜೀವನ ನಿರ್ವಹಣೆ ಮತ್ತು ಮಕ್ಕಳ ಭವಿಷ್ಯ ಹಾಗೂ ಅವರ ಶಿಕ್ಷಣಕ್ಕೆ ದಾರಿ ತೋರುವಂತೆ ಕೋರಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ಪರಿಶೀಲಿಸಿದ ಪ್ರಾಧಿಕಾರವು ನಾರಾಯಣ್‌ ಹಾಗೂ ಸರಳಾ ಅವರನ್ನು ಮಂಗಳೂರಿನ ನ್ಯಾಯಾಲಯದ ಸಂಕೀರ್ಣದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಗೆ ಆಹ್ವಾನಿಸಿ, ಅಲ್ಲಿ ನಾಲ್ಕು ಬಾರಿ ಕೌನ್ಸಲಿಂಗ್‌ಗೆ ಒಳಪಡಿಸಿತು. ಈ ಸಂದರ್ಭ ಪತಿ-ಪತ್ನಿ ಇಬ್ಬರೂ ಒಟ್ಟಿಗೆ ಬಾಳುವಂತೆ ಮನ ಪರಿವರ್ತನೆ ಮಾಡಲಾಯಿತು. ನೆಮ್ಮದಿಯ ಜೀವನ ಸಾಗಿಸಲು ಅವರಿಗಿರುವ ದಾರಿ, ಸೌಲಭ್ಯಗಳು, ಇಬ್ಬರೂ ಹೆಣ್ಣು ಮಕ್ಕಳ ಭವಿಷ್ಯ ಹಾಗೂ ಅವರ ಶಿಕ್ಷಣ ಸೇರಿದಂತೆ ಒಂದಾಗಿ ಬಾಳುವುದರಿಂದ ಆಗುವ ಅನುಕೂಲತೆಗಳ ಬಗ್ಗೆ ವಿವರವಾಗಿ ತಿಳಿಸಿಕೊಡಲಾಯಿತು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾದಿಂದ ಕೈಗೊಳ್ಳಲಾದ ಕೌನ್ಸೆಲಿಂಗ್‌ ಇಬ್ಬರ ಮೇಲೂ ಗಾಢ ಪರಿಣಾಮ ಬೀರಿದ್ದು, ವಿವಾಹ ವಾರ್ಷಿಕೋತ್ಸವವಾದ ಜ. 4ರಂದು ಇಬ್ಬರೂ ಮತ್ತೆ ಕೈಹಿಡಿದು ಅನ್ಯೋನ್ಯವಾಗಿ ಜೀವನ ಸಾಗಿಸಲು ಮುಂದಾದರು.

ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಮುರಲೀಧರ ಪೈ. ಬಿ. ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶ ಪೃಥ್ವೀರಾಜ್‌ ವರ್ಣೇಕರ್‌ ಅವರು ಈ ದಂಪತಿಗೆ ಪರಸ್ಪರ ಕೌನ್ಸೆಲಿಂಗ್‌ ನಡೆಸಿ, ಬೇರೆಯಾಗಿದ್ದ ಪತಿ-ಪತ್ನಿಯನ್ನು ಪ್ರಕರಣ ದಾಖಲಾದ ಅತಿ ಕಡಿಮೆ ಅವಧಿಯಲ್ಲಿ ಒಂದುಗೂಡಿಸಿದ್ದಾರೆ.

Leave a Comment

Your email address will not be published. Required fields are marked *