ಸುಳ್ಯ: ಗೂನಡ್ಕ ಮಾರುತಿ ಶಾಲೆಯ ಆಡಳಿತ ಮಂಡಳಿ ಸದಸ್ಯರೊಬ್ಬರು 9 ವರ್ಷದ ವಿದ್ಯಾರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಶಾಲಾ ಆಡಳಿತ ಮಂಡಳಿ ಸದಸ್ಯ ಕಿಶೋರ್ ಎಂಬವರು ವಿದ್ಯಾರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಈ ಘಟನೆ ಜಾಲತಾಣಗೆ ಸದ್ದು ಮಾಡಿತ್ತು. ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಪರವಾಗಿ ಡಾ| ಡಿ.ವಿ. ಲೀಲಾಧರ್ ಹಾಗೂ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್ ರವರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಯ ಪೋಷಕರ ಜೊತೆ ಮಾತುಕತೆ ನಡೆಸಿ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲು ಪ್ರಯತ್ನಿಸಿದ್ದರು.
ಆರೋಪಿಯ ರಕ್ಷಣೆಗೆ ಮುಂದಾಗಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಮಾಧ್ಯಮದ ವರದಿ ಮತ್ತು ಸ್ಥಳೀಯ ನಾಗರಿಕರ ದೂರಿನ ಮೇರೆಗೆ ಕಲ್ಯಾಣ ಇಲಾಖೆ ತನಿಖೆ ಕೈಗೊಂಡು ದೂರು ದಾಖಲಿಸಿತ್ತು. ನಂತರ ಪೊಲೀಸ್ ಇಲಾಖೆ ಆರೋಪಿಯ ವಿರುದ್ಧ ಸ್ವಯಂ ಪ್ರೇರಿತ FIR ದಾಖಲಿಸಿದೆ.
ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ವಿದ್ಯಾರ್ಥಿಯ ಪರವಾಗಿ ನಿಂತು ಮಕ್ಕಳ ಕಲ್ಯಾಣ ಮತ್ತು ಪೊಲೀಸ್ ಇಲಾಖೆ ಆರೋಪಿಯ ವಿರುದ್ದ ಎಫ್ಐಆರ್ ದಾಖಲಿಸಿದ್ದಕ್ಕೆ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.