ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಲಾಕ್ಡೌನ್ ಗುಮ್ಮ ಸುದ್ದಿ ಮಾಡುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಆರ್.ಅಶೋಕ್, ಗೃಹ ಸಚಿವ ಅರಗ ಜ್ಞಾನೇಂದ್ರ ಬಾಯಿಂದಲೇ ಲಾಕ್ಡೌನ್ ಬಗ್ಗೆ ಮಾತು ಹೊರಬಿದ್ದಿದೆ. ಕೊರೊನಾ ಜೊತೆ ಒಮಿಕ್ರಾನ್ ಏರಿಕೆ ಬೆನ್ನಲ್ಲೇ ರಾಜ್ಯದಲ್ಲೂ ಲಾಕ್ಡೌನ್ ಜಾರಿ ಬಗ್ಗೆ ಚರ್ಚೆಯಾಗತೊಡಗಿದೆ.
ಆರ್ಥಿಕ ಸ್ಥಿತಿಯನ್ನ ಬುಡಮೇಲು ಮಾಡಿರೋ ಇದೇ ಲಾಕ್ಡೌನ್ ಮತ್ತೆ ಯುಟರ್ನ್ ತೆಗೆದುಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಒಮಿಕ್ರಾನ್ ರೂಪದಲ್ಲಿ ವಕ್ಕರಿಸಿರೋ ಕೊರೊನಾ, ಭಾರತದಲ್ಲಿ 3ನೇ ಅಲೆ ಅಪ್ಪಳಿಸೋ ಆತಂಕ ಸೃಷ್ಟಿಸಿದೆ. ಹೀಗಿರುವಾಗ ಸಿಎಂ ಮತ್ತು ಸಚಿವರು ಆಡಿರೋ ಈ ಮಾತುಗಳು ಮತ್ತಷ್ಟು ದುಗುಡ ಹುಟ್ಟಿಸಿದೆ.
ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ರೂಪ ಬದಲಿಸಿ ದಾಂಗುಡಿ ಇಟ್ಟಿರೋ ಒಮಿಕ್ರಾನ್, ಲಾಕ್ಡೌನ್ ಹೊತ್ತು ತಂದಂತಿದೆ. ಹೊಸ ರೂಪಾಂತರಿ ವೇಗ ನೋಡಿದರೆ ಇನ್ನೇನು ಕೆಲವೇ ದಿನಗಳಲ್ಲಿ ಮೂರನೇ ಅಲೆ ಅಪ್ಪಳಿಸೋ ಆತಂಕ ಸೃಷ್ಟಿಯಾಗಿದೆ.
ಭಾರತದಲ್ಲಿ ನಿತ್ಯವೂ ಏರಿಕೆ ಕಾಣುತ್ತಿರೋ ಒಮಿಕ್ರಾನ್ ಆತಂಕದಿಂದ ದೆಹಲಿಯಲ್ಲಿ ಈಗಾಗಲೇ ಯೆಲ್ಲೋ ಅಲರ್ಟ್ ಜಾರಿ ಮಾಡಲಾಗಿದೆ. ಒಂದು ರೀತಿಯಲ್ಲಿ ದೆಹಲಿ ಮಿನಿ ಲಾಕ್ಡೌನ್ ವ್ಯೂಹದಲ್ಲಿ ಸಿಲುಕಿದೆ. ಆದರೆ ಇದರ ಜೊತೆಗೆ ದೆಹಲಿಯಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಎಲ್ಲಾ ಕಡೆ ಶೇ. 50 ರಷ್ಟು ನಿಯಮ ಇದೆ. ಹೋಟೆಲ್, ಬಾರ್ ಆಯಂಡ್ ರೆಸ್ಟೋರೆಂಟ್ಗಳಲ್ಲಿ ಟಫ್ ರೂಲ್ಸ್ ಜಾರಿ ಮಾಡಲಾಗಿದೆ.
ಹೀಗೆ ಬೇರೆ ರಾಜ್ಯದಂತೆ ಕರ್ನಾಟಕದಲ್ಲೂ ಇನ್ನಷ್ಟು ಕಠಿಣ ನಿಯಮ ಜಾರಿ ಮಾಡಲೇಬೇಕು ಅಂತ ಕಂದಾಯ ಸಚಿವ ಆರ್.ಅಶೋಕ್ ಹೇಳ್ತಿದ್ದಾರೆ. ಅದಕ್ಕಾಗಿ ತಜ್ಞರು ವರದಿ ಸಿದ್ಧ ಪಡಿಸುತ್ತಿದ್ದಾರೆ. ಅವರು ಏನು ಸೂಚಿಸುತ್ತಾರೋ ಅದನ್ನ ಯಥಾವತ್ತಾಗಿ ಜಾರಿ ಮಾಡುತ್ತೇವೆ. ಹಾಗೆಯೇ 3ನೇ ಅಲೆ ಬಂದರೆ ಅಚಾತುರ್ಯ ಆಗದಂತೆ ಸರ್ವ ಸನ್ನದ್ಧರಾಗಿದ್ದೇವೆ ಅಂದಿದ್ದಾರೆ.
ಕೊರೊನಾ ವೈರಸ್ ಸಂಬಂಧ ಜನರು ನೈಟ್ ಕರ್ಫ್ಯೂ ಇದ್ದರೂ ಸಹಕರಿಸದಿದ್ದರೆ ಲಾಕ್ ಡೌನ್ ಅನಿವಾರ್ಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ ಚಿಕ್ಕಮಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ.ಜನರ ಜೀವ ಉಳಿಸುವುದು ಸರ್ಕಾರದ ಬದ್ಧತೆ. ಜನ ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕು. ಒಂದು ವೇಳೆ ಪಾಲನೆ ಮಾಡದೇ ಇದ್ದರೆ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಲಾಕ್ ಡೌನ್ ಅನಿವಾರ್ಯ ಎಂದು ಹೇಳಿದ್ದಾರೆ.
ಒಟ್ಟಾರೆ ಕೊರೊನಾದ ಆರ್ಭಟ ಮುಂದುವರೆಯುತ್ತಿರುವ ಜೊತೆಗೆ ಲಾಕ್ ಡೌನ್ ಭೂತವೂ ಜನರನ್ನು ಮತ್ತಷ್ಟು ಕಂಗೆಡಿಸಿದೆ. ಮತ್ತೆ ಲಾಕ್ ಡೌನ್ ಎದುರಾದರೆ ಜನ ಜೀವನ ಮತ್ತಷ್ಟು ಹದೆಗೆಡುವುದರಲ್ಲಿ ಸಂಶಯವಿಲ್ಲ.